ADVERTISEMENT

ಶಿಕ್ಷಣದ ವ್ಯಾಪಾರ!

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST

30 ವರ್ಷದಲ್ಲಿ 3821 ಪಿ.ಯು ಕಾಲೇಜು (ಅದರಲ್ಲಿ 2828 ಖಾಸಗಿ ಅನುದಾನರಹಿತ ಕಾಲೇಜುಗಳು) ಎನ್ನುವ ವರದಿಯನ್ನು (ಪ್ರ.ವಾ., ಮಾ. 5) ಓದಿ ಆತಂಕವಾಯಿತು. ಹೆಚ್ಚಳವಾಗಿರುವ ಖಾಸಗಿ ಕಾಲೇಜುಗಳ ಸಂಖ್ಯೆಯು ಶಿಕ್ಷಣ ವ್ಯಾಪಾರೀಕರಣಕ್ಕೆ ನಿದರ್ಶನವಾಗಿದೆ.

ಶಿಕ್ಷಣ ಇಲಾಖೆಯ ಅವ್ಯವಸ್ಥೆ ಹಾಗೂ ಅಸಡ್ಡೆಯು ರಾಜ್ಯದಲ್ಲಿ ಖಾಸಗಿ ಶಾಲಾ–ಕಾಲೇಜುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತಿದೆ. ವಿದ್ಯಾರ್ಥಿಗಳ ಕೊರತೆಯ ಕಾರಣವನ್ನು ಮುಂದಿಟ್ಟುಕೊಂಡು ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಹಾಗೂ ಪದವಿಪೂರ್ವ ಕಾಲೇಜುಗಳನ್ನು ಮುಚ್ಚಿರುವುದು ಆತಂಕದ ವಿಚಾರ.

ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಮಾಧಿಯ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ಗಟ್ಟಿ ಅಡಿಪಾಯ ಹಾಕಿಕೊಳ್ಳಲು ಶಿಕ್ಷಣ ಇಲಾಖೆಯ ಸಡಿಲ ನಿಯಮಗಳೇ ನೇರ ಕಾರಣ. ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಲ್ಲಿ ಎಡುವುತ್ತಿರುವ ಇಲಾಖೆ, ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

ADVERTISEMENT

ಖಾಸಗಿ ಸಂಸ್ಥೆಗಳು ಶಿಕ್ಷಣ ವ್ಯಾಪಾರೀಕರಣದ ಭರಾಟೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಸುಲಿಗೆ ಮಾಡುವುದು ಒಂದೆಡೆಯಾದರೆ, ಸ್ನಾತಕೋತ್ತರ ಪದವೀಧರರು ಇಂಥ ಸಂಸ್ಥೆಗಳಲ್ಲಿ ಅರೆಕಾಲಿಕ ಉದ್ಯೋಗಿಗಳಾಗಿ, ಉದ್ಯೋಗಿಯೂ ಅಲ್ಲದ– ನಿರುದ್ಯೋಗಿಯೂ ಅಲ್ಲದ ಅತಂತ್ರ ಮತ್ತು ಅಭದ್ರ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರಿ ಕಾಲೇಜುಗಳನ್ನು ಮುಚ್ಚುವ ಈ ಪ್ರಕ್ರಿಯೆಯು ಉಪನ್ಯಾಸಕರಾಗಬೇಕು ಎಂಬ ಕನಸು ಹೊತ್ತವರಲ್ಲಿ ಆತಂಕ ಮೂಡಿಸಿದೆ.
-ನಾಗರಾಜ ಮಗ್ಗದ, ಕೊಟ್ಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.