ADVERTISEMENT

ಸರ್ಕಾರದ ಅವಜ್ಞೆ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ವಿಧಾನ ಸಭೆಯಲ್ಲಿ ಗಣ್ಯರ ನಿಧನಕ್ಕೆ ಸಂತಾಪ ಸೂಚಿಸುವಾಗ (ಫೆ.1)ಕಳೆದ ವಾರ ನಿಧನರಾದ ಭೂ ವಿಜ್ಞಾನಿ ಡಾ. ಬಿ.ಪಿ. ರಾಧಾಕೃಷ್ಣರ ಹೆಸರನ್ನು ಸರ್ಕಾರ ಮರೆಯಿತು.

ಕರ್ನಾಟಕದ ಒಣಭೂಮಿಯ ರೈತನಿಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಂತರ್ಜಲ ಘಟಕವನ್ನು ಸ್ಥಾಪಿಸಿ ನೆಲದ ನೀರನ್ನು ಎತ್ತಲು ಸೂಚಿಸಿ `ಅಂತರ್ಜಲ ಭಗೀರಥ~ ಎನಿಸಿಕೊಂಡವರು ರಾಧಾಕೃಷ್ಣ. ಅವರು ಭಾರತದ ಹಲವು ರಾಜ್ಯಗಳಿಗೆ ಅಂತರ್ಜಲ ಸಲಹೆಗಾರರಾಗಿ ರಾಷ್ಟ್ರಮಟ್ಟದಲ್ಲಿ ಖ್ಯಾತರಾಗಿದ್ದರು. ಬೆಂಗಳೂರಿಗೆ ಭೇಟಿ ನೀಡುವ ವಿದೇಶಿ ಭೂ ವಿಜ್ಞಾನಿಗಳು ಅವರನ್ನು ಭೇಟಿಯಾಗದೆ ಹೋದದ್ದಿಲ್ಲ. ಡಾ. ರಾಧಾಕೃಷ್ಣ ಸ್ಥಾಪಿಸಿ ಬೆಳೆಸಿದ `ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ~ ಈಗ ಅಂತರರಾಷ್ಟ್ರೀಯ ವಿಜ್ಞಾನ ಸಂಸ್ಥೆ. ಕೋಲಾರದಲ್ಲಿ ಪತ್ತೆಯಾದ ಅಪರೂಪದ ಖನಿಜವೊಂದಕ್ಕೆ `ರಾಧಾಕೃಷ್ಣೈಟ್~ ಎಂದು ಹೆಸರಿಟ್ಟು ಯೂರೋಪಿಯನ್ ವಿಜ್ಞಾನಿಯೊಬ್ಬರು ಕೃತಜ್ಞತೆ  ಮೆರೆದಿದ್ದಾರೆ.

ನಾಡಿನ ನೆಲದ ಖ್ಯಾತಿಗೆ ಮೆರುಗು ಕೊಡುವಲ್ಲಿ 60 ವರ್ಷಗಳಿಗೂ ಹೆಚ್ಚು ಕಾಲ ಶ್ರಮಿಸಿದ ರಾಧಾಕೃಷ್ಣ ಅವರಿಗೆ  ಇಪ್ಪತ್ತು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ಮನೆಗೇ ಹೋಗಿ ನೀಡಿತ್ತು. ಸರ್ಕಾರದ ಐದು ಇಲಾಖೆಗಳು ಅವರ ನಿರ್ದೇಶನದಂತೆ ಸಿದ್ಧಪಡಿಸಲಾದ ಭೂನಕ್ಷೆಯನ್ನೇ ಆಧರಿಸಿ ಕೆಲಸ ಮಾಡುತ್ತಿವೆ. ಅವರು ನಿಧನರಾದಾಗ ಅವರ ಮನೆ ಬಾಗಿಲಿಗೆ ಹೋಗಿ ಐದು ಹೂಗಳನ್ನಿಡಲು ಸರ್ಕಾರಕ್ಕೆ ನೆನಪಾಗಲಿಲ್ಲ.

ಆದರೆ, ಅದೇ ದಿನ ಲಂಡನ್‌ನ ಜಿಯಾಲಜಿಕಲ್ ಸೊಸೈಟಿ ರಾಧಾಕೃಷ್ಣರಿಗೆ ಸಂತಾಪ ಸೂಚಕ ಸಭೆ ಏರ್ಪಡಿಸಲು ಗೊತ್ತುವಳಿಯನ್ನು ಅಂಗೀಕರಿಸಿತ್ತು.  ನಾಡಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ ಈ ಮೇಧಾವಿಯ ನೆನಪು ಸರ್ಕಾರಕ್ಕೆ ಆಗದೇ ಹೋದದ್ದು ಅತ್ಯಂತ ದುರದೃಷ್ಟಕರ ವಿಚಾರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.