ADVERTISEMENT

ಸರ್ದಾರ್‌ ಸರೋವರದ ಹಿನ್ನೀರಿನ ಚಿತ್ರ: ಬವಣೆಗೆ ಕೊನೆಯಿಲ್ಲ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಸರ್ದಾರ್‌ ಸರೋವರದ ಹಿನ್ನೀರಿನ ಚಿತ್ರ: ಬವಣೆಗೆ ಕೊನೆಯಿಲ್ಲ
ಸರ್ದಾರ್‌ ಸರೋವರದ ಹಿನ್ನೀರಿನ ಚಿತ್ರ: ಬವಣೆಗೆ ಕೊನೆಯಿಲ್ಲ   

‘ಪ್ರಜಾವಾಣಿ’ಯಲ್ಲಿ ಡಿ. ಉಮಾಪತಿ ಬರೆದಿರುವ ‘ಬರೀ ಬೆಳಗಿಸಲಿಲ್ಲ... ಮುಳುಗಿಸಿತು ಕೂಡ’ (‘ಆಳ–ಅಗಲ’, ಅ. 21) ಮತ್ತು ‘ಮೇಧಾ ಎಂಬ ತಾಯಿ, ನರ್ಮದೆಯ ಮಗಳು’ (‘ಅಭಿಮತ’, ಅ. 23) ಎಂಬ ಈ ಎರಡು ಲೇಖನಗಳು ಸರ್ದಾರ್‌ ಸರೋವರದ ಹಿನ್ನೀರಿನಲ್ಲಿ ಮುಳುಗಡೆಗೊಂಡ ಆದಿವಾಸಿ ಜನರ, ರೈತರ, ಮೀನುಗಾರರ ಕರುಣಾಜನಕ ಚಿತ್ರವನ್ನು ಕಣ್ಣಿಗೆ ಕಟ್ಟುತ್ತವೆ.

ಈ ಬಡಪಾಯಿಗಳ ‘ತ್ಯಾಗ-ಬಲಿದಾನ’ ಭವ್ಯಭಾರತದ ಅಭಿವೃದ್ಧಿ ಅಧ್ಯಾಯಗಳ ಅಡಿಟಿಪ್ಪಣಿಗಳೂ ಆಗುವುದಿಲ್ಲ ಎಂಬ ಲೇಖಕರ ಮಾತು, ದನಿ ಇಲ್ಲದವರ ದನಿಯ ಮಾರ್ದನಿಯಾಗಿ ಮೊಳಗುತ್ತದೆ. ಸ್ವಾತಂತ್ರ್ಯ ಭಾರತದಲ್ಲಿ ಆಳುವ ಪಕ್ಷಗಳು ಅದು ಇದು ಎಂಬ ಭೇದವಿಲ್ಲದೆ ಎಲ್ಲಾ ಪಕ್ಷಗಳೂ ಬಡವರನ್ನು, ನಿರ್ಗತಿಕರನ್ನು ಇನ್ನಷ್ಟು ಶೋಷಿಸುವ ಜಿಗಣೆಗಳೇ ಆಗಿವೆ. ಕೇವಲ ಮಧ್ಯಮ, ಮೇಲ್ಮಧ್ಯಮ ವರ್ಗದ, ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಪೂರೈಸುವುದೇ ಇವುಗಳ ‘ರಾಷ್ಟ್ರೀಯ ಅಭಿವೃದ್ಧಿ’ ಆಗಿದೆ.

ಅಂದಹಾಗೆ ಪ್ರಸ್ತುತ ಸರ್ದಾರ್‌ ಸರೋವರದ ಎತ್ತರವನ್ನು 10 ಮೀಟರ್ ತಗ್ಗಿಸಿದ್ದರೂ ನರ್ಮದಾ ಕಣಿವೆಯಲ್ಲಿ 45 ಸಾವಿರ ಅರಣ್ಯವಾಸಿಗಳ ಬದುಕು ಮುಳುಗಡೆಯಾಗುತ್ತಿರಲಿಲ್ಲ. ಇಷ್ಟು ಎತ್ತರ ಏರಿಸಿ ವಿದ್ಯುತ್ ಶಕ್ತಿ ಪಡೆಯುವ ಬದಲಾಗಿ ಸೌರವಿದ್ಯುತ್ ಯೋಜನೆಗಳನ್ನು ಕೈಗೊಂಡಿದ್ದರೂ ಆಗುತ್ತಿತ್ತು. ಇದು ಸಾಮಾನ್ಯ ವಿವೇಕ.

ADVERTISEMENT

ಇನ್ನು ಮುಳುಗಡೆ ಸಂತ್ರಸ್ತರಿಗೆ ನಮ್ಮ ದೇಶ ಇರಲಿ, ಜಗತ್ತಿನ ಯಾವ ರಾಷ್ಟ್ರದಲ್ಲೂ ಸರ್ವ ಸಮರ್ಪಕವಾದ ಪರಿಸರಾತ್ಮಕ ಪುನರ್ವಸತಿ ಕಾರ್ಯ ನಡೆದಿಲ್ಲ. ಅದಿರಲಿ, ಸರ್ದಾರ್ ಸರೋವರದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜನರಿಗೆ ಮೊದಲು ಪುನರ್ವಸತಿ ಕಲ್ಪಿಸಿ, ನಂತರ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಮಾಡಿ ಎಂಬುದು ಸುಪ್ರೀಂ ಕೋರ್ಟು ಆದೇಶ. ಆದರೂ ಲೆಕ್ಕಿಸದೆ ಈಗ ಅಣೆಕಟ್ಟೆ ಮೇಲ್ಭಾಗದ ಜಲಾಶಯಗಳಿಂದ ನೀರು ಬಿಟ್ಟು ಜನರ ಬದುಕನ್ನು ಸಮಾಧಿ ಮಾಡಲಾಗಿದೆ.

ನರ್ಮದಾ ಬಚಾವೊ ಆಂದೋಲನದ ಮೊರೆಯನ್ನು 30 ವರ್ಷಗಳಿಂದಲೂ ಕಡೆಗಣಿಸಲಾಗಿದೆ. ಮೇಧಾ ಪಾಟ್ಕರ್‌ ತಾಯಿ, ಅಡವಿ ಜನರ ಒಡಲಿನ ದನಿಗೆ ದನಿಯಾಗಿ ಮೊರೆ ಇಡುತ್ತಲೇ ಬಂದಿದ್ದಾರೆ, ಆದರೂ ಲೆಕ್ಕಕ್ಕಿಲ್ಲ. ನಗರಗಳು ಮಾತ್ರ ಕೊಬ್ಬಿ ಬೆಳೆಯುತ್ತಿವೆ; ಕಾರ್ಪೊರೇಟ್ ಕಂಪೆನಿಗಳು ಭಾರತ ಬೆಳಗುತ್ತಿವೆ. ಇಂಥ ಮಹಾ ಮಹಾ ಅಣೆಕಟ್ಟೆಗಳ ಹಿನ್ನೀರಿನಲ್ಲಿ ಬಡವರ ಬದುಕು ಮಾತ್ರ ಕಣ್ಣು ಮುಚ್ಚುತ್ತಿದೆ. ಇದು ಭವ್ಯ ಭಾರತದ ಕನಸು ನನಸಾಗುತ್ತಿರುವ ಪರಿ. ‘ಕತ್ತಿ ಯಾವುದಾದರೆ ಏನು? ವಿದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೆ?’ ಎಂಬ ಕವಿವಾಣಿ ಮಾತ್ರ ಕೇಳುತ್ತಲೇ ಇದೆ. ಆದರೆ ಕೇಳಿಸಿಕೊಳ್ಳುವ ವ್ಯವಧಾನ ಯಾರಿಗಿದೆ?

–ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.