ಮಾಗಡಿ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಇನ್ನೂ ಸಂಪೂರ್ಣಗೊಂಡಿಲ್ಲ. ಸುಂಕದಕಟ್ಟೆವರೆಗೆ ರಸ್ತೆ ಅಗಲೀಕರಣಗೊಂಡಿದೆ. ಸುಂಕದಕಟ್ಟೆ ಬಜಾರ್‌ನಿಂದ ಹೇರೋಹಳ್ಳಿ ಕ್ರಾಸ್‌ವರೆಗೆ ಹೋಗುವ ರಸ್ತೆಬದಿಯಲ್ಲಿ ಒಂದು ವರ್ಷದಿಂದ ಮರಳು ಮತ್ತು ಜಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ.
ಅರ್ಧ ರಸ್ತೆಯಲ್ಲಿ ಲಾರಿಗಳೇ ಸಾಲಾಗಿ ನಿಂತಿರುತ್ತವೆ. ಇದು ಸಾಲದೆಂಬಂತೆ ಈಗ ಒಂದು ತಿಂಗಳಿಂದ ಬೆಳಿಗ್ಗೆ ತ್ಯಾಜ್ಯ ತುಂಬಿದ ಹತ್ತಾರು ಮಿನಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಈ ವಾಹನಗಳಿಂದ ತ್ಯಾಜ್ಯವನ್ನು ದೊಡ್ಡ ಲಾರಿಗಳಿಗೆ ತುಂಬಿ ಕೊಂಡೊಯ್ಯುತ್ತಿದ್ದಾರೆ. ಸಂಜೆ ಹೊತ್ತಿಗೆ ರಸ್ತೆಯಲ್ಲಿಯೇ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್‌ವರೆಗೂ ಈ ದೃಶ್ಯ ಕಾಣುತ್ತದೆ.
ಮರಳು ಲಾರಿ ನಿಲ್ಲಿಸುವುದರಿಂದ ರಸ್ತೆ ಅಗಲವಾಗಿದ್ದರೂ ವಾಹನ ಸವಾರರಿಗೆ ಉಪಯೋಗವಾಗುತ್ತಿಲ್ಲ. ಇನ್ನು ತ್ಯಾಜ್ಯ ಸುರಿಯುವುದರಿಂದ ದುರ್ವಾಸನೆ, ಬೀದಿ ನಾಯಿಗಳ ಕಾಟವೂ ಹೆಚ್ಚಾಗಿದೆ. ಇಲ್ಲಿನ ಪಾಲಿಕೆ ಸದಸ್ಯರು ಮತ್ತು ತ್ಯಾಜ್ಯ ಸಾಗಾಣಿಕೆಯ ಜವಾಬ್ದಾರಿ ವಹಿಸಿಕೊಂಡ ಗುತ್ತಿಗೆದಾರರು ಇದಕ್ಕೆ ಸಂಪೂರ್ಣ ಹೊಣೆಯಾಗಿದ್ದಾರೆ.
ತ್ಯಾಜ್ಯವನ್ನು ಎಲ್ಲಿ ಬೇಕಾದರೂ ಸುರಿಯಲು ಬಿಟ್ಟರೆ ಮುಂದೆ ಇಡೀ ರಸ್ತೆ ತ್ಯಾಜ್ಯದಿಂದ ತುಂಬಿ ಹೋಗಲಿದೆ. ಪಾಲಿಕೆ ಸದಸ್ಯರು ಇತ್ತ ಗಮನಹರಿಸಿ ರಸ್ತೆಬದಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಬೇಕಾಗಿ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.