ADVERTISEMENT

ಸುಜನಾ ಸಮಗ್ರ ಕೃತಿಗಳು ಹೊರಬರಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2011, 19:30 IST
Last Updated 19 ಮೇ 2011, 19:30 IST

ಈಚೆಗೆ ನಿಧನರಾದ `ಸುಜನಾ~ (ಎಸ್. ನಾರಾಯಣ ಶೆಟ್ಟಿ) 1950-53 ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿದ್ದು, ಕುವೆಂಪು, ಡಿ. ಎಲ್. ನರಸಿಂಹಾಚಾರ‌್ಯರಂತಹ ಶ್ರೇಷ್ಠ ಕವಿಗಳ ವಿದ್ವಾಂಸರ ಪಾಠ ಕೇಳುವ ಸೌಭಾಗ್ಯ ನಮ್ಮದಾ ಗಿತ್ತು. ಸಾಹಿತ್ಯದ ಶ್ರೇಷ್ಠ ವಿದ್ಯಾರ್ಥಿಯಾಗಿದ್ದು ಹಳೆಯ ಆಧುನಿಕ ಕಾವ್ಯಗಳನ್ನು ಗ್ರಹಿಸಿ ಅನುಭವಿಸುವ ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿಯಾಗಿದ್ದು ಅವರ ಒಡನಾಟ ನಮಗೆ ಒಂದು ವಿಶೇಷ ಅನುಭವವಾಗುತ್ತಿತ್ತು.

 ಮುಂದೆ ಅವರು ಕಾಲೇಜು ಅಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈಚೆಗೆ ಹಲವು ವರ್ಷಗಳಿಂದ ಅವರು ತೀವ್ರವಾದ ಪಾರ್ಕಿನ್ಸನ್ ಡಿಸೀಜ್‌ನಿಂದ (ಅದುರು ವಾಯು) ನರಳಿ ಜರ್ಝರಿತರಾಗಿದ್ದರು.

ಅವರ ಕೈ ಅವರ ಸ್ವಾಧೀನದಲ್ಲಿರಲಿಲ್ಲ; ನೆನಪಿನ ಶಕ್ತಿ ಚೆನ್ನಾಗಿತ್ತು. ಮಾತನಾಡು ತ್ತಿದ್ದರೂ ಅವರ ಮಾತು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಓಡಾಡುವ ಶಕ್ತಿ ಕಳೆದು ಕೊಂಡಿದ್ದರು. ಅವರನ್ನು ಶ್ರದ್ಧೆ ಪ್ರೀತಿಯಿಂದ ಆರೈಕೆ ಮಾಡಿದ ಅವರ ಶ್ರೀಮತಿ ಮತ್ತು ಮಕ್ಕಳು ನಮ್ಮ ಅಭಿನಂದನೆಗೆ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಅಂತಹ ಶ್ರೇಷ್ಠ ಕವಿ, ವಿಮರ್ಶಕರ ನಿಧನದಿಂದ ಕನ್ನಡನಾಡು ಒಬ್ಬ ಧೀಮಂತ ಪ್ರತಿಭಾಶಾಲಿಯನ್ನು ಕಳೆದು ಕೊಂಡಂತಾಗಿದೆ.

ಅವರು ಬರೆದದ್ದು ಕಡಮೆಯಾದರೂ ಅವುಗಳಲ್ಲಿ ಒಂದೊಂದೂ ಶಾಶ್ವತವಾಗಿ ಉಳಿಯುವ ಮೌಲ್ಯವುಳ್ಳವು. ಅವರ `ಯುಗಸಂಧ್ಯಾ~ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದುದು ನಮಗೆಲ್ಲ ಸಂತೋಷವನ್ನು ತಂದಿತ್ತು.

ನೋವಿನ ಸಂಗತಿಯೆಂದರೆ `ಸುಜನಾ~ ಬದುಕಿರುವಾಗ ಅವರ ಹೆಸರು ಪ್ರಚಾರಕ್ಕೆ ಬರಲಿಲ್ಲ. ಅದಕ್ಕೆ ಕಾರಣ - ಅವರ ಬದುಕು ಸಂಪೂರ್ಣವಾಗಿ ಅವರ ಮನೆಗೇ ಸೀಮಿತವಾಗಿದ್ದುದು. ಅವರ ಕೃತಿಗಳು ಪುನರ್ ಮುದ್ರಣಗೊಂಡು ಹೆಚ್ಚು ಹೆಚ್ಚು ಓದುಗರ ಕೈ ಸೇರಬೇಕಾಗಿದೆ.

 ಈ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಿಗಳು ಅವರ ಮಹಾಕಾವ್ಯವೂ ಸೇರಿದಂತೆ ಎಲ್ಲ ಕೃತಿಗಳ ಸಮಗ್ರ ಸಂಪುಟಗಳನ್ನು ಹೊರತರುವುದು ತೀರ ಅಗತ್ಯವಾಗಿದೆ.

ಅದರಿಂದ ಒಂದು ರೀತಿಯಲ್ಲಿ ಆ ಆತ್ಮೀಯ ಗೆಳೆಯ ಮಹಾಪ್ರತಿಭಾಶಾಲಿಗೆ ಒಂದು ಅರ್ಥಪೂರ್ಣ ರೀತಿಯ ಗೌರವವನ್ನು ಸಲ್ಲಿಸಿದಂತಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.