ಏರುತ್ತಿರುವ ಜನಸಂಖ್ಯೆ ಮತ್ತು ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವ ನಗರಗಳು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸಿವೆ. ನಿಜ. ದಿನ ಕಳೆದಂತೆ ಎಲ್ಲೆಡೆ ವಿದ್ಯುತ್ ಪೂರೈಕೆ ದುಸ್ತರವಾಗುತ್ತಿದೆ.
ಫಲವತ್ತಾದ ಕೃಷಿ ಭೂಮಿ ಅಥವಾ ದಟ್ಟ ಅರಣ್ಯಗಳಿರುವ ಕಡೆ ಉಷ್ಣ ವಿದ್ಯುತ್ ಸ್ಥಾವರ, ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವುದು, ಅಲ್ಲಿನ ಜನ, ನೆಲ, ಜಲ, ಸಂಸ್ಕೃತಿ ಎಲ್ಲವನ್ನೂ ನಿರ್ನಾಮ ಮಾಡಿ ವಿದ್ಯುತ್ ಉತ್ಪಾದನೆ ಮಾಡಿ ಶ್ರಿಮಂತಿಕೆಯ ನಗರೀಕರಣಕ್ಕೆ ಹಾದಿ ಸುಗಮ ಮಾಡಿಕೊಡುವುದು, ಇದೇ ಅಭಿವೃದ್ಧಿ ಎಂದು ಆಳ್ವಿಕರು ಭಾವಿಸಿದಂತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ರಾಯಚೂರು ಈಗಾಗಲೇ ಉಷ್ಣ ವಿದ್ಯುತ್ ಸ್ಥಾವರ ಹಾರುಬೂದಿಯಿಂದ ಮುಚ್ಚಿಹೋಗಿದೆ. ಒಂದೆಡೆ ಗಣಿಯ ಧೂಳು ಮತ್ತೊಂದೆಡೆ ಹಾರು ಬೂದಿ, ಅಲ್ಲಿ ಹಸಿರೆಲೆಗಳೇ ಕಾಣುವುದಿಲ್ಲ. ನಂತರ ಮೈಸೂರಿನ ಚಾಮಲಾಪುರದ ಹಸಿರು ನೆಲವನ್ನು ನುಂಗಿಹಾಕುವ ಯತ್ನ ನಡೆಯಿತು. ಆದರೆ ಜನತೆಯ ಪ್ರತಿರೋಧ ಸರ್ಕಾರವನ್ನು ಹಿಮ್ಮೆಟ್ಟಿಸಿತು. ಈಗ ಉಡುಪಿಯ ಸರದಿ. ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಈಗಾಗಲೇ ಸಾವಿರಾರು ಎಕರೆ ಕೃಷಿ ಭೂಮಿ ಬಲಿಯಾಗಿದೆ.
ಈ ಸ್ಥಾವರದ ವಿರುದ್ಧ ಸಿಡಿದೆದ್ದ ಜನತೆಗೆ ತಮ್ಮ ನೈತಿಕ, ತಾತ್ವಿಕ ಮತ್ತು ವ್ಯಕ್ತಿಗತ ಬೆಂಬಲ ವ್ಯಕ್ತಪಡಿಸಿದ ಪೇಜಾವರರು ‘ನಾಗಾರ್ಜುನ ಸ್ಥಾವರ ಎಂಬ ಭಸ್ಮಾಸುರನನ್ನು ಹೊಡೆದೋಡಿಸಿದ ಮೇಲೆಯೇ ನನಗೆ ನಿದ್ದೆ ಬರುವುದು’ ಎಂದು ಘೋಷಿಸುವ ಮೂಲಕ ಹೋರಾಟಕ್ಕೆ ಹೊಸ ಆಯಾಮ ನೀಡಿದ್ದರು.ಸಮಸ್ತ ಜನಸಮುದಾಯಗಳಿಗೆ ಎಂದೂ ಸ್ಪಂದಿಸದ ಕಾವಿಧಾರಿಗಳು ಈ ಹೋರಾಟಕ್ಕೆ ಧುಮುಕಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ಆದರೆ ಸ್ಥಾವರದ ಸ್ಥಾಪನೆ ದೃಢವಾಗುತ್ತಿರುವಂತೆ ಜನರ ಪ್ರತಿರೋಧ ಮುಗಿಲು ಮುಟ್ಟುತ್ತಿರುವ ವೇಳೆಯಲ್ಲಿ, ಪ್ರತಿಭಟನಕಾರರನ್ನು ಹೊರಗಿಟ್ಟು ಕಂಪೆನಿಯವರೊಡನೆ ಮಾತುಕತೆ ನಡೆಸುವ ಮೂಲಕ ರಾಜಿಯಾಗಲೆತ್ನಿಸಿದ ಪೇಜಾವರರು ತಮ್ಮ ನಿಜವಾದ ಬಣ್ಣ ಏನೆಂದು ಸ್ವತಃ ಪ್ರದರ್ಶಿಸಿದ್ದಾರೆ.ಸ್ಥಾವರದ ಹಾರುಬೂದಿ ಜನರನ್ನು ಬಾಧಿಸುತ್ತಿದೆಯೋ ಇಲ್ಲವೋ, ಪೇಜಾವರರ ಕಣ್ಣೊಳಗಂತೂ ಪ್ರವೇಶಿಸಿದೆ. ಧರ್ಮ, ಸಂಸ್ಕೃತಿ, ಜನಸೇವೆಯ ಸೋಗು ಹಾಕುವ ಸಾಂಸ್ಕೃತಿಕ ಜಂಗಮರೂ ಬಂಡವಾಳಶಾಹಿಗಳ ಸ್ಥಾವರಗಳಿಗೆ ಬಲಿಯಾಗುತ್ತಿರುವುದು ಅಚ್ಚರಿ ಮೂಡಿಸದಿದ್ದರೂ ಬೇಸರ ಮೂಡಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.