ಅಂತೂ ಇಂತೂ ಡಿವೈಎಸ್‌ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಿ ಬಿಜೆಪಿ ಪ್ರಣೀತ ವಿರೋಧ ಪಕ್ಷಗಳ ಹೋರಾಟಕ್ಕೆ ಒಂದು ಆಯಾಮ ಸಿಕ್ಕಂತಾಯಿತು. ಜೊತೆಗೆ 24X7 ವಿದ್ಯುನ್ಮಾನ ಸುದ್ದಿ ವಾಹಿನಿಗಳು ನಡೆಸಿದ ಚರ್ಚೆಗಳಿಗೆ ಒಂದು ತಿರುವು ಸಿಕ್ಕಿತು.
ಆದರೆ ಪ್ರಾಂಜಲ ಮನಸ್ಸಿನಿಂದ ಘಟನೆಯನ್ನು ಅವಲೋಕಿಸಿದರೆ ಜಾರ್ಜ್ ಅವರು ಮಾಡಿದ ಅಪರಾಧ ಏನೆಂಬುದೇ ತಿಳಿಯುತ್ತಿಲ್ಲ. ಗಣಪತಿಯವರು ನೇಣು ಹಾಕಿಕೊಳ್ಳುವ ಮುನ್ನ ಸ್ಥಳೀಯ ಟಿ.ವಿ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ಮಾತ್ರದಿಂದಲೇ ಜಾರ್ಜ್ ಆರೋಪಿ ಎಂಬುದು ಹೇಗೆ ಸಾಬೀತಾಗುತ್ತದೆ?
ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿ ವ್ಯಕ್ತಿ ತಾನು ಹೇಗೂ ಸಾಯುತ್ತೇನೆ ಎಂದುಕೊಂಡು ಯಾರದಾದರೂ ಹೆಸರು ಹೇಳಿಯೋ ಬರೆದಿಟ್ಟೋ ಅವಸಾನ ಹೊಂದಿದರೆ ಹಾಗೆ ಹೆಸರಿಸಿಕೊಂಡವರ ಗತಿ ಏನು? ಭಾರತೀಯ ದಂಡ ಸಂಹಿತೆ ಕಲಂ 306ರ ದುರುಪಯೋಗ ಆಗುವುದಿಲ್ಲವೇ?
ಈ ಪ್ರಕರಣದಲ್ಲಿ ಸಚಿವರಾಗಲಿ, ಮೇಲಧಿಕಾರಿಗಳಾಗಲಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿರ್ವಹಿಸಬಹುದಾದ ಕರ್ತವ್ಯಗಳನ್ನು ಮಾಡಿದರೆ, ಅದರಲ್ಲೂ ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಕ್ರಮ ಕೈಗೊಂಡದ್ದು ಬಾಧಿತ ಅಧಿಕಾರಿಗೆ ಅಪಥ್ಯವಾದರೆ ಸಾಯಬೇಕೇಕೆ? ಶಿಸ್ತುಕ್ರಮಕ್ಕೆ ಒಳಗಾದವರು ಮತ್ತು ವರ್ಗಾವಣೆಯಲ್ಲಿ ಅನನುಕೂಲ ಹೊಂದಿದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋದರೆ ಸರ್ಕಾರಿ ನೌಕರ ಮತ್ತು ಅಧಿಕಾರಿ ವರ್ಗ ಸಾವಿರಾರು ಸಂಖ್ಯೆಯಲ್ಲಿ ಸಾಯಬೇಕಾಗುತ್ತದೆ.
ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕಾರಣ ಇದ್ದೋ ಇಲ್ಲದೆಯೋ ಮೇಲಧಿಕಾರಿಗಳ ಶಿಸ್ತು ಕ್ರಮಕ್ಕೆ ಒಳಪಡುವವರ ಸಂಖ್ಯೆ ಅಗಣಿತವಾಗಿರುತ್ತದೆ. ಹಾಗೆಯೇ ವರ್ಗಾವಣೆ ದಂಧೆಯಲ್ಲಿ ಸಿಕ್ಕವರಿಗೆ ಸೀರುಂಡೆ ಎಂಬಂತೆ ಪ್ರಸ್ತುತ ಸರ್ಕಾರದಲ್ಲಿ ಗೃಹ ಸಚಿವರ ದಕ್ಷ (?) ಸಲಹೆಗಾರರ ಕೃಪಾ ದೃಷ್ಟಿಗೆ ಈಡಾದವರ ಪಾಡು ನೋಡಿದರೆ, ಕಳೆದ 3 ವರ್ಷಗಳಿಂದ ಅದೆಷ್ಟೋ ಪೊಲೀಸ್ ಅಧಿಕಾರಿಗಳು ಇಹಲೋಕವನ್ನು ತ್ಯಜಿಸಬೇಕಿತ್ತು. ಹಾಗೆ ನೋಡಿದರೆ ಇಲಾಖೆಯಲ್ಲಿ ವಿಚಾರಣೆ, ಬಡ್ತಿ ನಿರಾಕರಣೆ, ಅಮಾನತು ಎಲ್ಲವನ್ನೂ ಕ್ರೀಡಾ ಮನೋಭಾವದಿಂದ ಅನುಭವಿಸಿದವರು ಸಾವಿರಾರು ಮಂದಿ ಇದ್ದಾರೆ.
ಗರ್ವಿಷ್ಟ, ಕೋಪಿಷ್ಟ, ದುರಹಂಕಾರಿ ಅಧಿಕಾರಿಯೊಬ್ಬರು ಬೆಂಗಳೂರಿನ ಆಯುಕ್ತರಾಗಿದ್ದಾಗ ಜರುಗಿಸಿದ ಶಿಸ್ತು ಕ್ರಮ ಸಾವಿರಾರು. ಅವರು ಎಂದೋ ಮಾಡಿದ ಅನಾಹುತಗಳಿಗೆ ಈಗ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕೇ? ಇದು ಸಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.