ADVERTISEMENT

ಹೋರಾಟ ಅಪಥ್ಯವೇ?

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST

ಮಹಿಳಾ ಸಾಹಿತ್ಯವೆಂದರೆ ಒಂದು ಕಾಲಕ್ಕೆ ಅಡುಗೆಮನೆ ಸಾಹಿತ್ಯವೆಂದು ಹೀಗಳೆಯುತ್ತಿದ್ದ ಸಂದರ್ಭದಲ್ಲಿ ಅದನ್ನೆಲ್ಲ ಧಿಕ್ಕರಿಸಿ ನಿಂತದ್ದು ಲೇಖಕಿಯರ ಸಮೂಹ. ಯಾವುದೇ ದೌರ್ಜನ್ಯವಿರಲಿ, ಶೋಷಣೆ ಇರಲಿ ಅವನ್ನೆಲ್ಲ ವಿರೋಧಿಸಿ ಬರೆಯುತ್ತ ಹೋದ ಸೃಜನಶೀಲ ಲೇಖಕಿಯರ ದೊಡ್ಡ ಪಡೆಯೇ ನಮ್ಮ ಬೆನ್ನ ಹಿಂದಿದೆ. ಹೀಗಿರುವಾಗ, ಕರ್ನಾಟಕ ಲೇಖಕಿಯರ ಸಂಘದ (ಕಲೇಸಂ) ಪ್ರತಿಷ್ಠಿತ ‘ಅನುಪಮಾ ಪ್ರಶಸ್ತಿ’ಗೆ ಭಾಜನರಾದ ಹಿರಿಯ ಲೇಖಕಿ  ಉಷಾ ಪಿ. ರೈ ಅವರು ಪ್ರಶಸ್ತಿ ಪಡೆದ ನಂತರದ ತಮ್ಮ ಭಾಷಣದಲ್ಲಿ, ‘ಲೇಖಕಿಯರ ಸಂಘ ಮಹಿಳಾ ಹೋರಾಟ, ಚಳವಳಿ ಅಂತೆಲ್ಲ ಹೋಗುತ್ತಿದೆ. ನೀವು ಹಾಗೆಲ್ಲ ಹೋಗಬೇಡಿ’ ಎಂದು ಇಂದಿನ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು. ಅಲ್ಲದೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲೂ ‘ಸಾಹಿತ್ಯ ಪರಿಷತ್ತಿನಲ್ಲಿ ಮೊದಲಿನಿಂದಲೂ ಮಹಿಳೆಯರಿಗೆ ಅಷ್ಟಾಗಿ ಅವಕಾಶ ಇರಲಿಲ್ಲ. ಲೇಖಕಿಯರಿಗೆ ತಮ್ಮ ಭಾವನೆವ್ಯಕ್ತಪಡಿಸಲು ಸರಿಯಾದ ವೇದಿಕೆ ಬೇಕು ಎಂದು ಆರಂಭವಾದ ವೇದಿಕೆ ಇದು. ಮೊದಲೆಲ್ಲ ಇಲ್ಲಿ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳೇ ಹೆಚ್ಚು ನಡೆಯುತ್ತಿದ್ದವು. ಈಗ ಇದು ಮಹಿಳಾ ಹೋರಾಟದ ಕಡೆಗೆ ಹೊರಳಿದೆ. ಹೋರಾಟಕ್ಕೆ ಬೇಕಾದಷ್ಟು ವೇದಿಕೆಗಳಿವೆ. ಸಾಹಿತ್ಯಕ್ಕೆ ಇದು ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.

ಈ ಹೇಳಿಕೆಗಳಲ್ಲಿ ಮೇಲ್ನೋಟಕ್ಕೆ ಕಾಣುವ ವಿಪರ್ಯಾಸ ಗಮನಿಸಬೇಕು. ಮೊದಲಿಗೆ, ಲೇಖಕಿಯರ ಸಂಘ 39 ವರ್ಷಗಳ ಹಿಂದೆ ಹುಟ್ಟಿದ್ದಕ್ಕೆ ಮೂಲ ಕಾರಣವೇ ಸಾಹಿತ್ಯ ಪರಿಷತ್ತಿನ ಅವಕಾಶಗಳಲ್ಲಿದ್ದ ಅಸಮಾನತೆಯ ಬಗ್ಗೆ ಬೆಳೆದ ಅಸಮಾಧಾನ. ಅದರಿಂದ ಲೇಖಕಿಯರು ಪ್ರತ್ಯೇಕವಾಗಿ ತಮ್ಮದೇ ಸಂಘವನ್ನು ಕಟ್ಟಿಕೊಂಡಿದ್ದು ಒಂದು ಬಗೆಯಲ್ಲಿ ಅವರು ನಡೆಸಿದ ಸೌಮ್ಯ ಹೋರಾಟವೇ ಅಲ್ಲವೇ? ಕಸಾಪದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಲೇಸಂ ಹುಟ್ಟಿಕೊಂಡಿದ್ದು ಲೇಖಕಿಯರ ಪ್ರತಿರೋಧದ ನೆಲೆಯಲ್ಲಿಯೇ ತಾನೇ?

ಜೊತೆಗೆ ಈ ಪ್ರಶಸ್ತಿ, ಕನ್ನಡದ ಪ್ರಸಿದ್ಧ ಲೇಖಕಿ ಡಾ. ಅನುಪಮಾ ನಿರಂಜನ ಅವರ ಹೆಸರಿನಲ್ಲಿದೆ. ಅವರು ಲೇಖಕಿ ಮಾತ್ರವಲ್ಲ, ಹೋರಾಟಗಾರ್ತಿಯಾಗಿಯೂ ಪ್ರಸಿದ್ಧರು ಎಂಬುದು ನೆನಪಿನಲ್ಲಿರಲಿ. ದೌರ್ಜನ್ಯ, ಅನ್ಯಾಯ ನಡೆಯುತ್ತಿದ್ದರೂ ಅದನ್ನು ಬಹಿರಂಗವಾಗಿ ವಿರೋಧಿಸದೆ ‘ನಮ್ಮ ಕೆಲಸ ಬರೀ ಬರೆಯುವುದು’ ಎಂದು ದೂರ ನಿಲ್ಲಬೇಕೇ? ಸಮಾಜದ ಆಗುಹೋಗುಗಳಿಗೆ ಮಿಡಿಯದೆ ಕತೆ, ಕವನ ಅಥವಾ ಯಾವುದೇ ಸಾಹಿತ್ಯ ರಚಿಸಲು ಸಾಧ್ಯವೆ? ಕನ್ನಡಕ್ಕೆ ಅನ್ಯಾಯವಾದಾಗ ಸಾಹಿತಿ ಅನಕೃ ಅವರು ಹೋರಾಟ ಮಾಡಿದ್ದು, ಮುಂದೆ ಗೋಕಾಕ್ ಚಳವಳಿಯಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳೆಲ್ಲ ಭಾಗವಹಿಸಿದ್ದು ಅಪರಾಧವೇ?

ADVERTISEMENT

ಇನ್ನೂ ಒಂದು ವಿರೋಧಾಭಾಸ ಇಲ್ಲಿದೆ. ಲೇಖಕಿಯರ ಸಂಘವು  ಹೋರಾಟ, ಚಳವಳಿ ಅಂತೆಲ್ಲ ಹೋಗಬೇಕಾದ್ದಿಲ್ಲ ಎಂದು ಹೇಳಿದ ಇದೇ ಲೇಖಕಿ, ಅದೇ ವೇದಿಕೆಯ ಅದೇ ಭಾಷಣದಲ್ಲೇ ‘ಈಗ ಕಸಾಪದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ, ಇದನ್ನು ನಾವು ಪ್ರಶ್ನಿಸಬೇಕು’ ಎಂದದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹೋರಾಟವೇ ಬೇಡ ಅಂದ ಮೇಲೆ ಇದನ್ನು ಮಾತ್ರ ಯಾವ ನೆಲೆಯಲ್ಲಿ ಪ್ರಶ್ನಿಸಬೇಕು?  ಇಂದು ಲೇಖಕಿಯರು ದನಿಯೆತ್ತಿ ಒಗ್ಗಟ್ಟಿನಿಂದ ಬಹಿರಂಗವಾಗಿ ಹೋರಾಡಬೇಕಾದ ಕೆಟ್ಟ ಬೆಳವಣಿಗೆಗಳು ನಮ್ಮ ದೇಶದಲ್ಲಿ ಆಗುತ್ತಿವೆ. ಲೇಖಕಿಯರು ಇಂದು ಹೆಚ್ಚಿನ ಸೂಕ್ಷ್ಮತೆ, ಸಂವೇದನೆ ಬೆಳೆಸಿಕೊಳ್ಳಬೇಕಾದ ತುರ್ತು ಇದೆ. ಆದ್ದರಿಂದ ಹಿರಿಯ ಲೇಖಕಿಯರು ಕಿರಿಯ ಲೇಖಕಿಯರ ದಾರಿ ತಪ್ಪಿಸಬಾರದು.

ಸುಗುಣಾ ರಾಜು, ಜಯಂತಿ ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.