ADVERTISEMENT

ಗಿಡ ನೆಡದವರಿಗೆ ನೆರಳಿನ ಚಿಂತೆ!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 21:53 IST
Last Updated 22 ಏಪ್ರಿಲ್ 2021, 21:53 IST

ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಗೆಳೆಯನೊಬ್ಬ ಬೇಸಿಗೆ ಆರಂಭವಾದಾಗಿನಿಂದ ಭೇಟಿಯಾಗು
ವುದನ್ನೇ ಕಡಿಮೆ ಮಾಡಿದ್ದ. ಬಹುಶಃ ಬಿಸಿಲಿಗೆ ಹೆದರಿರಬೇಕು ಇಲ್ಲವೇ ಅತಿಯಾದ ಕೆಲಸದ ಒತ್ತಡದಲ್ಲಿರ
ಬೇಕೆಂದು ಭಾವಿಸಿದ್ದೆ. ಈಚೆಗೆ ಭೇಟಿಯಾದ ಅವನನ್ನು ಈ ಬಗ್ಗೆ ವಿಚಾರಿಸಿದಾಗ, ‘ಬಿಸಿಲಿನ ಭಯ ನನಗಲ್ಲ ನನ್ನ ಗಾಡಿಗೆ. ನಮ್ಮ ಆಫೀಸಿನ ಮುಂದೆ ಎರಡೇ ಗಿಡಗಳಿವೆ. ಅವುಗಳ ನೆರಳಿನಲ್ಲಿ ಗಾಡಿ ಬಿಡಲು ಎಲ್ಲರಿಗೂ ಪೈಪೋಟಿ ಇದೆ. ಹಾಗಾಗಿ ಬೆಳಿಗ್ಗೆ ಬೇಗ ಹೋದವರು ಮಾತ್ರ ನೆರಳಿನಲ್ಲಿ ಗಾಡಿ ನಿಲ್ಲಿಸಬಹುದು, ತಡವಾದರೆ ಗಾಡಿಯನ್ನು ಬಿಸಿಲಿನಲ್ಲಿ ಒಣಗಿಸಬೇಕಾಗುತ್ತದೆ.‌ ಇದರಿಂದ ಗಾಡಿಯ ಸೀಟ್, ಟೈರ್‌ಗಳು ಹಾಳಾಗುತ್ತವೆ’ ಎಂದ. ‘ಆಫೀಸಿನ ಮುಂದೆ ಇನ್ನೂ ನಾಲ್ಕಾರು ಗಿಡಗಳನ್ನು ಬೆಳೆಸಲು ಸಾಕಾಗುವಷ್ಟು ಸ್ಥಳಾವಕಾಶವಿದೆಯಲ್ಲ, ಒಂದೆರಡು ಸಸಿಗಳನ್ನು ನೆಟ್ಟು ಬೆಳೆಸಿ’ ಎಂದು ಸಲಹೆ ನೀಡಿದೆ. ನನ್ನ ಮಾತಿಗೆ ಅವನ ಉದಾಸೀನ ಉತ್ತರ ಕೊಟ್ಟಿತು. ಜೊತೆಗೆ ಮನುಷ್ಯ ಸ್ವಭಾವದ ಕುರಿತು ಮರುಕ ಹುಟ್ಟುವಂತೆ ಮಾಡಿತು.

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾತ್ರ ಗಿಡಮರಗಳ ಕುರಿತಾದ ಕಾಳಜಿ ಅತೀ ಕಡಿಮೆ. ಯಾರಾದರೂ ಗಿಡಮರಗಳನ್ನು ನೆಟ್ಟು ಬೆಳೆಸಲಿ, ಆದರೆ ಅದರ ನೆರಳು ಮಾತ್ರ ನಮಗಿರಲಿ ಎನ್ನುವ ಧೋರಣೆಯೇ ಎಲ್ಲೆಡೆ ತುಂಬಿದೆ. ಬೇಸಿಗೆಯಲ್ಲಿ ವಾಹನಗಳ ನಿಲುಗಡೆಗೆ ತಂಪಾದ ಮರಗಳ ನೆರಳು ಹುಡುಕುವ ನಾವು, ಅವೇ ಮರಗಳನ್ನು ಉಳಿದ ದಿನಗಳಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಜೀವನದಲ್ಲಿ ಒಂದೇ ಒಂದು ಗಿಡವನ್ನೂ ನೆಟ್ಟು ಬೆಳೆಸದ, ಈಗಾಗಲೇ ಯಾರೋ ನೆಟ್ಟಿರುವ ಸಸಿಗಳಿಗೆ ನೀರುಣಿಸದ, ಅನವಶ್ಯಕವಾಗಿ ಮರಗಳನ್ನು ಕತ್ತರಿಸುವುದನ್ನು ಪ್ರತಿಭಟಿಸದ ನಾವುಗಳು ನಮ್ಮ ವಾಹನಗಳನ್ನು ಮಾತ್ರ ನೆರಳಿನಲ್ಲಿ ನಿಲ್ಲಿಸಲು ಹೆಣಗಾಡುವುದು ವ್ಯಂಗ್ಯವಲ್ಲವೇ? ಪ್ರತೀ ಕುಟುಂಬವು ಇಂತಿಷ್ಟು ಗಿಡಮರಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಅವರಿಗೆ ಸರ್ಕಾರದ ಉಚಿತ ಸೌಕರ್ಯಗಳನ್ನು ನೀಡಲಾಗುತ್ತದೆ ಎಂಬ ಕಾನೂನು ಜಾರಿಯಾಗಬೇಕು. ಈ ದಿಸೆಯಲ್ಲಿ ಸಮುದಾಯ ಅರಣ್ಯವಾದರೂ ಬೆಳೆದರೆ ಅದರಿಂದ ಎಷ್ಟೋ ಶುದ್ಧ ಗಾಳಿ, ನೆರಳು ದೊರಕಿದಂತಾಗುತ್ತದೆ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.