ADVERTISEMENT

ಸಮಯೋಚಿತ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST

ಅರೆನ್ಯಾಯಿಕ ಪ್ರಕರಣಗಳ ವಿಚಾರಣೆಗಳನ್ನು ಕಂದಾಯ ಅಧಿಕಾರಿಗಳ ಬದಲು ನ್ಯಾಯಾಂಗ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಬೇಕೆಂಬ ವಿಚಾರ (ಪ್ರ.ವಾ., ಜ. 2) ಸಮಂಜಸವಾದುದು. ಕಂದಾಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಕಂದಾಯ ಅಧಿಕಾರಿಗಳೇ ನಿರ್ಣಯಿಸುವ ಕ್ರಮ ಬ್ರಿಟಿಷರ ಕಾಲದ ಪಳೆಯುಳಿಕೆ. ತಹಶೀಲ್ದಾರ್, ಅಸಿಸ್ಟೆಂಟ್ ಕಮಿಷನರ್, ಜಿಲ್ಲಾಧಿಕಾರಿ ಮೊದಲಾದ ಅಧಿಕಾರಿಗಳಿಗೆ ಕೆಲಸದ ಹೊರೆ ವಿಪರೀತ. ಹಾಗಿರುವಾಗ, ಅವರು ತೀರ್ಮಾನಿಸಬೇಕಾದ ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿದ ದಿನದಂದು  ಬೇರೆ ತುರ್ತು ಕೆಲಸ ಬಂದರೆ ಆ ದಿನ ಅವರ ನ್ಯಾಯಾಲಯದ ಕಲಾಪ ನಡೆಯುವುದಿಲ್ಲ. ನ್ಯಾಯಾಂಗದಲ್ಲಿ ಇರುವಂತಹ ನ್ಯಾಯ ಶಿಸ್ತಿನ ವ್ಯವಸ್ಥೆ ಕಂದಾಯ ಅಧಿಕಾರಿಗಳ ಕೋರ್ಟಿನಲ್ಲಿ ಇರುವುದಿಲ್ಲ. ಹೀಗಾಗಿ ಅಲ್ಲಿಗೆ ಅನುಭವಿ ವಕೀಲರು ಹೋಗುವುದು ಕಡಿಮೆ. ಅನೇಕ ಸಲ ಕಂದಾಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಕಿರಿಯ ವಕೀಲರಿಗೆ ಅನುಭವ ಸಾಕಾಗುವುದಿಲ್ಲ. ಒಟ್ಟಿನಲ್ಲಿ ಅರೆನ್ಯಾಯಿಕ ವಿಚಾರಣೆಗೆ ಹೋಗುವ ಕಕ್ಷಿದಾರರು ಅಲ್ಲಿ ಹೋರಾಡಿ ಮುಂದೆ ಹೈಕೋರ್ಟ್‌ ಅಥವಾ ಇತರ ನ್ಯಾಯಾಲಯಗಳನ್ನು ಪ್ರವೇಶಿಸುವುದೇ ಹೆಚ್ಚು. ಅಂತಹ 1.22 ಲಕ್ಷದಷ್ಟು ಕೇಸುಗಳು ಬಾಕಿ ಇವೆ ಎಂದರೆ ಸಮಸ್ಯೆ ಎಷ್ಟು ಅಗಾಧ ಎಂಬುದನ್ನು ಊಹಿಸಬಹುದು.

ಅರೆನ್ಯಾಯಿಕ ಪ್ರಕರಣಗಳನ್ನು ಕಂದಾಯ ಅಧಿಕಾರಿಗಳಿಂದ ನ್ಯಾಯಾಂಗ ಅಧಿಕಾರಿಗಳ ಸುಪರ್ದಿಗೆ ಕೊಡಲು ಹೈಕೋರ್ಟ್‌ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರು ನೀಡಿದ ಸಲಹೆ ಸಮಯೋಚಿತ.

–ಎಸ್.ಆರ್. ವಿಜಯಶಂಕರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.