ADVERTISEMENT

ರಾಜಕಾರಣಿಗಳಲ್ಲಿ ಅಸಹಿಷ್ಣುತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಕರ್ನಾಟಕದಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಜನರು ಪ್ರೀತಿ– ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ, ರಾಜಕಾರಣಿಗಳಲ್ಲಿ ಅಸಹಿಷ್ಣುತೆ ಭುಗಿಲೆದ್ದಿದೆ.

ಮಂಗಳೂರಿನ ಕದ್ರಿ ದೇವಳದ ಧ್ವನಿವರ್ಧಕದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಧ್ವನಿವರ್ಧಕವನ್ನು ಸ್ಥಗಿತಗೊಳಿಸಬೇಕು ಎಂದು ಡಿಸೋಜ ಎಂಬುವರು ಈಚೆಗೆ ಕೋರ್ಟ್‌ ಮೊರೆ ಹೋಗಿದ್ದ ಪ್ರಕರಣ ವಿವಾದ ಸೃಷ್ಟಿಸುವಂತೆ ಇತ್ತು. ತಮ್ಮ ಅರ್ಜಿಯು ಎರಡು ಕೋಮಿನ ನಡುವೆ ವೈಮನಸ್ಸಿಗೆ ಕಾರಣವಾಗಬಹುದೆಂಬ ಶಂಕೆ ಮೂಡಿದಾಗ ಡಿಸೋಜ, ದೂರನ್ನು ಹಿಂಪಡೆದರು ಎಂದು ವರದಿಯಾಗಿದೆ. ವೈಯಕ್ತಿಕ ತೊಂದರೆ ಸಹಿಸಿಕೊಂಡು ಸಹಬಾಳ್ವೆಗೆ ಮುಂದಾಗುವ ಡಿಸೋಜ ಅವರಂತಹ ಜನರೇ ನಮ್ಮ ನಿಜವಾದ ಪ್ರತಿನಿಧಿಗಳು.

ಇನ್ನು ಮಂಗಳೂರಿನ ಬಳಿ ಹಾಡಹಗಲೇ ಹತ್ಯೆಗೆ ಒಳಗಾದ ವ್ಯಕ್ತಿ, ಬಿಜೆಪಿಯ ಕಾರ್ಯಕರ್ತ ಎನ್ನಲಾಗಿದೆ. ಅವರು, ಮುಸ್ಲಿಂ ವ್ಯಕ್ತಿಯ ಒಡೆತನದ ಅಂಗಡಿಯಲ್ಲಿ ನೌಕರಿ ಮಾಡುತ್ತಿದ್ದರು. ಹತ್ಯೆಯಿಂದ ಆ ಮುಸ್ಲಿಂ ವ್ಯಕ್ತಿಯೂ ಭಾವುಕರಾಗಿ ದುಃಖಿಸಿದರು. ಎಲ್ಲ ಕೋಮಿನವರೂ ವೈಯಕ್ತಿಕ ನೆಲೆಯಲ್ಲಿ ಧರ್ಮಾತೀತರಾಗಿ ಒಂದೇ ಕುಟುಂಬದವರಂತೆ ಬಾಳುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಯಾವ ಪುರಾವೆ ಬೇಕು?

ADVERTISEMENT

ಆದರೂ ಈಗ ಕರಾವಳಿ ಉದ್ವಿಗ್ನವಾಗಿದೆ. ಪ್ರಶಾಂತ ಮನಸ್ಸಿಗೆ ವಿಷ ಹಿಂಡುವ ದುಷ್ಕರ್ಮಿಗಳು ಯಾವ ಕಾಲಕ್ಕೂ ಇರುತ್ತಾರೆ. ವಿರೋಧಿಗಳು ಇರುವುದೇ ರಾಜಕೀಯ ಮಾಡುವುದಕ್ಕೆ. ಇಂಥ ಪ್ರಸಂಗ ಮರುಕಳಿಸದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ. ಸರ್ಕಾರವೇ ಮೂಕ ಸಾಕ್ಷಿಯಾದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ.

–ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.