ADVERTISEMENT

ಅವಧಿ ವಿಸ್ತರಣೆ ಬೇಡ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು ಈಗಿರುವ ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸುವ ಉದ್ದೇಶದಿಂದ, ಪರಿಷತ್ತಿನ ಬೈಲಾ ತಿದ್ದುಪಡಿಗೆ ಮುಂದಾಗಿರುವ ಕ್ರಮ ಸರಿಯಲ್ಲ.

ಮೈಸೂರು ಮಹಾರಾಜರ ಕಾಲದಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್, ನಾಡಿನ ಅನೇಕ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಾ, ನಾಡು–ನುಡಿಯ ಏಳಿಗೆಗೆ ಗಮನಾರ್ಹ ಕಾಣಿಕೆ ನೀಡುತ್ತಾ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತಿಗೂ ರಾಜಕೀಯ ಅಂಟಿಕೊಳ್ಳುತ್ತಿರುವುದು ಅತ್ಯಂತ ವಿಷಾದದ ಸಂಗತಿ.

ಕ.ಸಾ.ಪ.ದಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿರುವ ಅನೇಕ ಅಧ್ಯಕ್ಷರು, ಮೂರು ವರ್ಷಗಳ ಸೇವಾ ಅವಧಿಯಲ್ಲೇ ಅನೇಕ ಸಾಹಿತ್ಯ ಚಟುವಟಿಕೆಗಳ ಜೊತೆಗೆ ರಚನಾತ್ಮಕ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡು ಸಾಹಿತ್ಯ ಪರಿಷತ್ತನ್ನು ಜನಪ್ರಿಯಗೊಳಿಸಿದ್ದಾರೆ ಮತ್ತು ಅಭಿವೃದ್ಧಿಪಡಿಸಿದ್ದಾರೆ. ಭವ್ಯ ಇತಿಹಾಸ ಹೊಂದಿರುವ ಇಂತಹ ಸಂಸ್ಥೆಯ ಬೈಲಾ ತಿದ್ದುಪಡಿ ಮಾಡಲು ಹೊರಟಿರುವ ಕ್ರಮ ಅವೈಜ್ಞಾನಿಕವಾಗಿದೆ. ಅವಧಿ ವಿಸ್ತರಿಸುವುದರ ಹಿಂದೆ ಪರಿಷತ್ತಿನ ಏಳಿಗೆಗಿಂತ ಸ್ವತಃ ಲಾಭ ಮಾಡಿಕೊಳ್ಳುವ ಉದ್ದೇಶ ಇದ್ದಂತಿದೆ. ಉದ್ದೇಶಿತ ತಿದ್ದುಪಡಿಯು ಹಾಲಿ ಕಾರ್ಯಕಾರಿ ಸಮಿತಿಯ ಆಡಳಿತಾವಧಿಗೂ ಅನ್ವಯವಾಗುವಂತೆ ಮಾಡಿಕೊಳ್ಳ ಹೊರಟಿರುವುದರಿಂದ ಇದು
ಸ್ಪಷ್ಟವಾಗುತ್ತದೆ. ಪರಿಷತ್ತಿಗೆ ಇನ್ನೂ ಹೆಚ್ಚು ಸೇವೆ ಸಲ್ಲಿಸಬೇಕೆಂಬ ಅಭಿಲಾಷೆ ಹೊಂದಿದ್ದರೆ, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಅಧ್ಯಕ್ಷರಾಗಿ ಸೇವೆ ಸಲ್ಲಿಸಬಹುದಲ್ಲವೇ?

ADVERTISEMENT

ಏನೆ ಇದ್ದರೂ, ಬೈಲಾ ತಿದ್ದುಪಡಿಗೂ ಮುನ್ನ ಜಿಲ್ಲಾವಾರು ಸದಸ್ಯರ ಸಭೆ ಕರೆದು ಅವರ ಅಭಿಪ್ರಾಯವನ್ನು ಸಹ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ಸೂಕ್ತ.

ಸೂರಿ ಪ್ರಭು, ಚಿಕ್ಕಮಗಳೂರು (ಕ.ಸಾ.ಪ. ಆಜೀವ ಸದಸ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.