ADVERTISEMENT

600 ಜಿ ಬಸ್ ಸಂಚಾರ ಪುನರಾರಂಭಿಸಲಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಕುಮಾರಸ್ವಾಮಿ ಬಡಾವಣೆ ಮಾರ್ಗವಾಗಿ ಚಂದಾಪುರಕ್ಕೆ ಸುಮಾರು ಐದು ವರ್ಷಗಳಿಂದ ಸಂಚರಿಸುತ್ತಿದ್ದ 600 ಜಿ ಬಸ್‌ನ ಸಂಚಾರ 2.6.13ರಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಕಾರ್ಮಿಕರು, ಶಾಲಾಮಕ್ಕಳು, ಐಟಿ ಕಂಪನಿ ಉದ್ಯೋಗಿಗಳು, ಶಿಕ್ಷಕರು ಹಾಗೂ ಸಾರ್ವಜನಿರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವುದಕ್ಕಾಗಿಯೇ ರೂ.925 ಕೊಟ್ಟು ಮಾಸಿಕ ಪಾಸ್ ತೆಗೆದುಕೊಂಡಿರುತ್ತಾರೆ. ಅಷ್ಟು ದುಡ್ಡು ಕೊಟ್ಟು ಪಾಸ್ ಕೊಂಡುಕೊಂಡರೂ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಅಂದರೆ ಹೇಗೆ? ಬಿಎಂಟಿಸಿ ಅಧಿಕಾರಿಗಳು ಇದಕ್ಕೆ ಉತ್ತರಿಸಬೇಕು ಹಾಗೂ ಸ್ಥಗಿತಗೊಂಡಿರುವ ಬಸ್‌ನ ಸಂಚಾರವನ್ನು ಪುನರಾರಂಭಿಸಬೇಕು.  ಇದರಿಂದಾಗಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ತೊಂದರೆಯಾಗುತ್ತಿದೆ. ಕೂಡಲೇ 600 ಜಿ ಸಂಚರಿಸುವಂತಾಗಲಿ. 
-ಮಹದೇವ್

ದುಬಾರಿ ವಾಯುವಜ್ರ
ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಏಕಾಏಕಿ ಹೆಚ್ಚಿಸಿರುವ ಕುರಿತು ಬೆಳ್ಳಾವೆ ರಮೇಶ್ ಅವರು `ಮೆಟ್ರೊ' ಪುರವಣಿಯ ಕುಂದುಕೊರತೆ ವಿಭಾಗದಲ್ಲಿ (28.5.201) ಬರೆದಿರುವ ಪತ್ರ ಪ್ರಸ್ತುತ. ಬಿಎಂಟಿಸಿಯವರು ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆಂದು ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಿರುವುದು ಸರಿಯಷ್ಟೆ.

ಆದರೆ ಪ್ರಯಾಣದಲ್ಲಿ ರೂ.2ರಿಂದ 3ರವರೆಗೆ ತೋರಿಸಿರುವ ರಿಯಾತಿ ಹಿರಿಯ ನಾಗರಿಕರಿಗೆ ಏನೇನೂ ಅಲ್ಲ. ಇದು ತೋರಿಕೆಗಷ್ಟೇ ನೀಡಿದ ರಿಯಾಯಿತಿ. ರಮೇಶ್ ಸೂಚಿಸಿರುವಂತೆ ದಿನದ ಬಸ್‌ಪಾಸ್ ಅನ್ನು ರೂ.25ಕ್ಕೆ ಹಾಗೂ ದಿನದ ಟಿಕೆಟ್ ದರವನ್ನು ರೂ.10ಕ್ಕೆ ನಿಗದಿಪಡಿಸಿದ್ದಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.

ಇದಲ್ಲದೆ ಬಿಎಂಟಿಸಿಗೆ ಓಡಿಸುತ್ತಿರುವ ವಜ್ರ, ವಾಯುವಜ್ರ ಬಸ್ ದರವನ್ನು ತೀರಾ ದುಬಾರಿ. ಇದನ್ನು ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿದಲ್ಲಿ ಎಲ್ಲ ನಾಗರಿಕರಿಗೂ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಬಿಟ್ಟರೆ ಈ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ತೀರಾ ಕಡಿಮೆ.

ಕೆಲವೊಮ್ಮೆ ಒಬ್ಬಿಬ್ಬರು ಪ್ರಯಾಣಿಕರು ಮಾತ್ರ ಆ ಬಸ್‌ಗಳಲ್ಲಿ ಇರುತ್ತಾರೆ. ಈ ಬಸ್‌ಗಳಿಂದಾಗುವ ನಷ್ಟವನ್ನು ಜನರೇ ಭರಿಸಬೇಕಾಗಿದೆ. ಹೀಗಾಗಿ ಬಿಎಂಟಿಸಿ ಯಾವಾಗಲೂ ನಷ್ಟದಲ್ಲೇ ಇರುತ್ತದೆ. ಈ ಬಗ್ಗೆ ಸಂಸ್ಥೆಯು ಕಣ್ಣು ತೆರೆದು ನೋಡಲಿ.
-ಕೆ.ವಿ.ದಯಾನಂದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.