ADVERTISEMENT

ವಾಚಕರ ವಾಣಿ: ಅನುದಾನಿತ ಶಾಲೆಗಳಿಗೂ ಬೇಕು ಕೃಪಾಕಟಾಕ್ಷ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST

ಇಂಗ್ಲಿಷ್‌ ಮಾಧ್ಯಮದತ್ತ ವಿದ್ಯಾರ್ಥಿಗಳ ಆಕರ್ಷಣೆಯಿಂದ ಸರ್ಕಾರಿ ಶಾಲೆಗಳಷ್ಟೇ ಅಲ್ಲ, ಕನ್ನಡ ಬೋಧನಾ ಮಾಧ್ಯಮವಾಗಿರುವ ಖಾಸಗಿ ಅನುದಾನಿತ ಶಾಲೆಗಳೂ ತೀವ್ರ ಸಂಕಷ್ಟ ಎದುರಿಸುತ್ತಿವೆ. ಅನುದಾನಿತ ಪ್ರೌಢಶಾಲೆಗಳ ಪ್ರತೀ ತರಗತಿಯಲ್ಲೂ ಕನಿಷ್ಠ ಇಪ್ಪತೈದು ವಿದ್ಯಾರ್ಥಿಗಳಿರುವುದು ಕಡ್ಡಾಯ. ತಪ್ಪಿದರೆ ಶಿಕ್ಷಕರ ವೇತನಾನುದಾನ ನಿಂತು ಹೋಗುತ್ತದೆ. ಆದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ತುಂಬಿಕೊಳ್ಳಲು ಇಂಗ್ಲಿಷ್‌ ಮಾಧ್ಯಮ ವಿಭಾಗ ತೆರೆಯಲು ಅನುಮತಿಯಿದೆ. ಇದಕ್ಕಾಗಿ ಹೆಚ್ಚುವರಿ ಶಿಕ್ಷಕ ಹುದ್ದೆಗಳ ಜೊತೆಗೆ ಕೊಠಡಿಗಳ ನಿರ್ಮಾಣಕ್ಕೂ ಅನುದಾನವಿದೆ. ಸರ್ಕಾರದ ಈ ಉದಾರ ನೀತಿಯಿಂದಾಗಿ ಹಲವು ಶಾಲೆಗಳು ಆರನೇ ತರಗತಿಯಿಂದಲೇ ಇಂಗ್ಲಿಷ್ ಮೀಡಿಯಂ ವಿಭಾಗ ತೆರೆದಿವೆ.

ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳಲ್ಲಿ ಕೆಲವರ ವಿರೋಧದ ನಡುವೆಯೂ ಎಲ್‍ಕೆಜಿ, ಯುಕೆಜಿ ಆರಂಭಿಸಲು ಸಿದ್ಧತೆಗಳಾಗುತ್ತಿವೆ. ಬದಲಾದ ಕಾಲಘಟ್ಟದಲ್ಲಿ, ಬದಲಾಗುತ್ತಿರುವ ಪೋಷಕರ ಮನಃಸ್ಥಿತಿಯಲ್ಲಿ ಇಂತಹ ನಡೆ ಸರ್ಕಾರಕ್ಕೂ ಅನಿವಾರ್ಯ. ಆದರೆ ಅನುದಾನಿತ ಶಾಲೆಗಳಿಗೆ ಮಾತ್ರ ಇಂತಹ ಕೃಪೆಯಿಲ್ಲ. ಕನ್ನಡ ಮಾಧ್ಯಮ ಶಾಲೆಗಳು ಇಂಗ್ಲಿಷ್ ವಿಭಾಗ ತೆರೆಯುವಂತಿಲ್ಲ. ಈ ಕಠಿಣ ನಿಯಮವೇ ಹಲವಾರು ಅನುದಾನಿತ ಶಾಲೆಗಳಿಗೆ ಮುಳುವಾಗಿರುವುದು. ಕನ್ನಡದ ಜೊತೆಗೆ ಇಂಗ್ಲಿಷ್‌ ಮಾಧ್ಯಮ ವಿಭಾಗವನ್ನೂ ತೆರೆದಾಗ ಮಾತ್ರ ವಿದ್ಯಾರ್ಥಿಗಳ ಕನಿಷ್ಠ ಸಂಖ್ಯೆಯನ್ನು ಕಾಯ್ದುಕೊಳ್ಳಲು ಸಾಧ್ಯ. ನಿಯಮಗಳನ್ನು ಮಾನವೀಯಗೊಳಿಸಿ ಹೆಚ್ಚುವರಿ ಶಿಕ್ಷಕರ ಹುದ್ದೆಗಳಿಗಾಗಲೀ, ಕೊಠಡಿಗಳಿಗಾಗಲೀ ಅನುದಾನ ನೀಡದೆ, ಇಂಗ್ಲಿಷ್‌ ಮಾಧ್ಯಮ ವಿಭಾಗ ತೆರೆಯಲು ಷರತ್ತುಬದ್ಧವಾಗಿ ಅನುಮತಿಸಿದರೆ ಸರ್ಕಾರಕ್ಕೂ ಆರ್ಥಿಕವಾಗಿ ಹೊರೆಯಾಗದು, ಜೊತೆಗೆ ಗುಣಮಟ್ಟದ ಗ್ರಾಮೀಣ ಶಾಲೆಗಳನ್ನು ಬದುಕಿಸಿದಂತೆಯೂ ಆಗುತ್ತದೆ.

-ಡಾ. ಮುರಳೀಧರ ಕಿರಣಕೆರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT