ADVERTISEMENT

ವಾಚಕರ ವಾಣಿ | ಎಸಿಬಿ ದಾಳಿ: ಪರಿಣಾಮ ಮುಖ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 20:00 IST
Last Updated 17 ಮಾರ್ಚ್ 2022, 20:00 IST

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಾಜ್ಯದಲ್ಲಿ 18 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ, ಅವರ ಬಳಿ ಅಪಾರ ಪ್ರಮಾಣದ ನಗದು, ಚಿನ್ನ ಹಾಗೂ ಇತರ ಆಸ್ತಿ ಇರುವುದನ್ನು ಪತ್ತೆ ಮಾಡಿದೆ. ಈ ಕ್ರಮವು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿರಲೂ ಸಾಕು. ಆದರೆ ಅದು ಭ್ರಷ್ಟಾಚಾರ ತಡೆಯುವಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವುದರ ಬಗ್ಗೆ ಅನುಮಾನಗಳು ಹುಟ್ಟುತ್ತವೆ.

ಈ ಬಗೆಯ ದಾಳಿಗಳ ಆರಂಭದ ಹಂತದ ವಿಷಯ ಮಾತ್ರ ಸಾರ್ವಜನಿಕರ ಗಮನಕ್ಕೆ ಮಾಧ್ಯಮಗಳ ಮೂಲಕ ಬರುತ್ತದೆ. ನಂತರ ಜರುಗಿಸಿದ ಕ್ರಮಗಳ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಈ ಮಾಹಿತಿಯನ್ನು ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರೆ ಎಸಿಬಿಯ ಕ್ರಮದ ಬಗ್ಗೆ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಇಲ್ಲವಾದಲ್ಲಿ ಇದೊಂದು ಪ್ರಚಾರದ ಭಾಗವಾಗಬಹುದು.

ಎಸಿಬಿಯ ಇಂತಹ ದಾಳಿಗಳು ದೂರುಗಳನ್ನು ಆಧರಿಸಿಯೇ ಇರುತ್ತವೆ. ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ಆಸ್ತಿ ಸಂಗ್ರಹಿಸಿರುವ ಮಾಹಿತಿ ಅವರ ಇಲಾಖಾ ಮೇಲಧಿಕಾರಿಗಳ ಗಮನಕ್ಕೆ ಬರುವುದಿಲ್ಲವೇ? ಆರಂಭಿಕ ಹಂತದಲ್ಲಿಯೇ ಈ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿದಲ್ಲಿ ಅವರು ದೊಡ್ಡ ಪ್ರಮಾಣದ ಅಕ್ರಮ ಆಸ್ತಿ ಸಂಗ್ರಹಿಸುವುದನ್ನು ಮತ್ತು ಜನರ ಲೂಟಿ ಮಾಡುವುದನ್ನು ತಡೆಯಬಹುದಲ್ಲವೇ? ಇಂತಹ ದಾಳಿಗಳು ನಿರಂತರವಾಗಿ ಹೆಚ್ಚುತ್ತಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ.
-ಸಂಗಯ್ಯ ಅ. ಹಿರೇಮಠ,ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.