ಶಿವಮೊಗ್ಗ ಜಿಲ್ಲೆಯ ನರಸೀಪುರ ಗ್ರಾಮದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ನಾಟಿ ಔಷಧ ನೀಡುತ್ತಿದ್ದ ನಾರಾಯಣಮೂರ್ತಿ ಅವರು ನಿಧನರಾಗಿರುವುದರಿಂದ, ಅವರ ಮಕ್ಕಳು ಈ ಔಷಧ ನೀಡುವುದನ್ನು ಮುಂದುವರಿಸಿದ್ದಾರೆ. ಆದರೆ ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 17). ತಮ್ಮ ಗ್ರಾಮದಲ್ಲೇ ಅನೇಕರು ಕ್ಯಾನ್ಸರ್‌ನಿಂದ ಮರಣ ಹೊಂದಿದ್ದಾರೆ ಮತ್ತು ಈ ನಾಟಿ ಔಷಧಕ್ಕೆ ಕಾಯಿಲೆಗಳನ್ನು ವಾಸಿ ಮಾಡುವ ಯಾವ ಶಕ್ತಿಯೂ ಇಲ್ಲ ಎಂದು ಗ್ರಾಮಸ್ಥರು ಸಂಧಾನ ಸಭೆಯಲ್ಲಿ ಹೇಳಿದ್ದಾರೆ.
ಈ ಕಾರಣಕ್ಕೆ ಕೆಲವು ವಿಚಾರಗಳು ಮುಖ್ಯವಾಗುತ್ತವೆ. ನರಸೀಪುರದ ನಾಟಿ ಔಷಧದಿಂದ ಮಾರಣಾಂತಿಕ ರೋಗಗಳು ವಾಸಿಯಾಗಿರುವ ನಿದರ್ಶನಗಳು ಇಲ್ಲ. ಕಾಯಿಲೆ ಅಂತಿಮ ಘಟ್ಟದಲ್ಲಿ ಇದ್ದಾಗ, ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗಬಹುದೆಂಬ ಭಾವದಿಂದ, ಯಾವುದೇ ವೈಜ್ಞಾನಿಕ ತಳಹದಿ ಇಲ್ಲದಿದ್ದರೂ ಈ ಔಷಧದ ಮೊರೆ ಹೋಗುತ್ತಿದ್ದವರ ಸಂಖ್ಯೆಯೇ ಹೆಚ್ಚು. ಸಮೂಹ ಸನ್ನಿಗೆ ಒಳಗಾದಂತೆ ಜನ ವರ್ತಿಸುತ್ತಿದ್ದರು.ಹಣ ಮಾಡುವುದಕ್ಕೆ ನೂರಾರು ಹಾದಿ ಎಂಬಂತೆ ಇದೂ ಒಂದು. ಹೀಗೆ ಅನಧಿಕೃತವಾಗಿ ಔಷಧ ನೀಡುವುದನ್ನು ನಿಷೇಧಿಸುವುದು ಒಳ್ಳೆಯದು. ಅದೂ ಅಲ್ಲದೆ ಯಾವ ರೀತಿಯ ತರಬೇತಿಯಾಗಲೀ ಕಾನೂನಿನ
ಪರವಾನಗಿಯನ್ನಾಗಲೀ ಹೊಂದಿರದ ಅವರ ಮಕ್ಕಳು ಹೇಗೆ ಇದನ್ನು ಮುಂದುವರಿಸಲು ಸಾಧ್ಯ?
-ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.