ADVERTISEMENT

ಆಟದ ಮೈದಾನ ಖಾಲಿ ನಿವೇಶನವಲ್ಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 18:21 IST
Last Updated 5 ಡಿಸೆಂಬರ್ 2022, 18:21 IST

ಆಟದ ಮೈದಾನ ಖಾಲಿ ನಿವೇಶನವಲ್ಲ

ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ ವಾರ್ಡ್ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಶಾಲೆ ನಿರ್ಮಾಣವಾಗುತ್ತಿರುವುದರ ಕುರಿತು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿರುವುದು ವರದಿಯಾಗಿದೆ
(ಪ್ರ.ವಾ., ಡಿ. 4). ಇದು ಒಳ್ಳೆಯ ಬೆಳವಣಿಗೆ. ಏಕೆಂದರೆ ಬೆಂಗಳೂರಿನಲ್ಲಿ ಕ್ರೀಡೆಗಳಿಗೆಂದು ಮೀಸಲಿಟ್ಟ ಮೈದಾನಗಳು ಅನ್ಯ ಉದ್ದೇಶಗಳಿಗೆ ಧಾರಾಳವಾಗಿ ಬಳಕೆಯಾಗುತ್ತಿವೆ. ಸಭೆ, ಸಮಾರಂಭಗಳಿಗಾಗಿ ಆಟದ ಮೈದಾನಗಳ ಅತಿಕ್ರಮಣ ತಾತ್ಕಾಲಿಕ ಸ್ವರೂಪದ್ದಾದರೆ, ಸರ್ಕಾರದ ಕಚೇರಿಗಾಗಿ, ಶಾಲೆಗಳಿಗಾಗಿ, ಶುದ್ಧ ನೀರಿನ ಘಟಕಕ್ಕಾಗಿ, ಇಂದಿರಾ ಕ್ಯಾಂಟೀನ್‍ಗಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಶಾಶ್ವತ ಅತಿಕ್ರಮಣವಾಗಿದೆ. ಆಟದ ಮೈದಾನಗಳು ಕೆಲವು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವ್ಯರ್ಥವಾಗಿ ಬಿದ್ದಿರುವ ಖಾಲಿ ನಿವೇಶನಗಳಂತೆ ಕಾಣುತ್ತಿರಬಹುದು.

ಶಾಲಾಕಾಲೇಜುಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಎಷ್ಟು ಮುಖ್ಯವೋ ಹಾಗೆಯೇ ಆಟದ ಮೈದಾನಗಳು ಅವರ ಶರೀರದ ಸದೃಢ ಬೆಳವಣಿಗೆಗೆ ಅಷ್ಟೇ ಮುಖ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಒಂದು ಕಡೆ ಮೊಬೈಲ್ ಗೀಳಿನಲ್ಲಿ ಸಿಕ್ಕಿಹಾಕಿಕೊಂಡಿರುವ ಮಕ್ಕಳಿಗೆ ತಮ್ಮ ಶರೀರಕ್ಕೆ ವ್ಯಾಯಾಮ ಬೇಕು ಅನಿಸುತ್ತಿಲ್ಲ. ಇನ್ನೊಂದು ಕಡೆ, ಆಟಕ್ಕೆ ಮೀಸಲಿಟ್ಟ ಆಟದ ಮೈದಾನಗಳು ಅನ್ಯ ಉದ್ದೇಶಕ್ಕೆ ಎಗ್ಗಿಲ್ಲದೆ ಬಳಕೆಯಾಗುತ್ತಿವೆ. ಆರೋಗ್ಯವಂತ ಸಮಾಜ ನಿರ್ಮಾಣದ ದೃಷ್ಟಿಯಿಂದ, ಮನೆಯಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಆಟದ ಮಹತ್ವದ ಅರಿವನ್ನು ಮೂಡಿಸುವ ಅಗತ್ಯವಿದೆ. ಹಾಗೆಯೇ ಆಟಕ್ಕೆ ಮೀಸಲಿಟ್ಟ ಮೈದಾನಗಳನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದೆಂಬ ಎಚ್ಚರ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೂಡಬೇಕಿದೆ. ಒಂದು ವೇಳೆ ಆಟದ ಮೈದಾನಗಳನ್ನು ಅತಿಕ್ರಮಿಸುವ ಪ್ರಯತ್ನಗಳು ನಡೆದರೆ ಅದನ್ನು ವಿರೋಧಿಸುವ ಛಾತಿಯನ್ನು ಸಾರ್ವಜನಿಕರು ಬೆಳೆಸಿಕೊಳ್ಳಬೇಕಿದೆ.

ADVERTISEMENT

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.