ADVERTISEMENT

ವಾಚಕರವಾಣಿ: ನಂಬಿಕೆ ನಮ್ಮೊಳಗಿನ ಬೆಳಕಾಗಲಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST

ಕೋಳಿ ಕೂಗದ, ಮಂಚ ಇಲ್ಲದ ಮೈಲಾಪುರ ಸುದ್ದಿ (ಪ್ರ.ವಾ., ಜ. 13) ಓದಿ ಒಂದು ಕ್ಷಣ ದಂಗುಬಡಿದಂತಾಯಿತು. ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ 350 ಕುಟುಂಬಗಳು, ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಮಲ್ಲಯ್ಯ ದೇವರಿಗೆ ಕೋಳಿ ಕೂಗುವ ಶಬ್ದ ಕೇಳಬಾರದು ಎಂಬ ಕಾರಣಕ್ಕೆ ಊರಲ್ಲಿ ಯಾರೊಬ್ಬರೂ ಶತಮಾನಗಳಿಂದಲೂ ಕೋಳಿ ಸಾಕುವುದಿಲ್ಲ, ದೇಗುಲದಲ್ಲಿ ಮಂಚ ಇರುವುದರಿಂದ ಗ್ರಾಮದ ಯಾರೊಬ್ಬರೂ ಮಂಚ ಬಳಸುವುದಿಲ್ಲ. ಇದು ಮೈಲಾರಲಿಂಗೇಶ್ವರ ದೇವಸ್ಥಾನದ ವಿಶೇಷ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಇದು ಊರಿನ ವಿಶೇಷ ಅಲ್ಲ. ಆ ಊರಿಗೆ ಅಂಟಿರುವ ಮೌಢ್ಯ ಅಷ್ಟೇ.

ಮದುವೆಯ ಹೊಸತರಲ್ಲಿ ಸಂಗಾತಿಗಳು ಮಂಚದ ಮೇಲೆ ಒರಗಿಕೊಳ್ಳಲು ಅವಕಾಶ ಇಲ್ಲ. ದಣಿದು ಬಂದ ಜೀವಗಳಿಗೆ ಮಂಚದ ಮೇಲೆ ಸಣ್ಣ ನಿದ್ದೆಗೂ ಆಸ್ಪದವಿಲ್ಲ. ತುಂಬು ಗರ್ಭಿಣಿಯರಿಗೆ, ಹೆರಿಗೆ ಆದವರಿಗೆ ಮಂಚದ ಅಗತ್ಯ ಬಂದಾಗ, ಅವರಿಗಾಗುವ ನೋವಿಗೆ ಯಾವ ದೇವರ ಹೆಸರು ಹೇಳಿ ಸಮಾಧಾನ ಪಡಿಸುವಿರಿ? ವೃದ್ಧರು, ಅಂಗವಿಕಲರಿಗೆ ಮಂಚದ ಅನಿವಾರ್ಯ ಇದ್ದೇ ಇರುತ್ತದೆ. ಇವರೆಲ್ಲ ದೇವರ ಹೆಸರಲ್ಲಿ ಹಿಂಸೆ ಅನುಭವಿಸಬೇಕೆ?

ಅನಾರೋಗ್ಯದಿಂದ ಬಳಲುವವರು, ರೋಗಿಗಳು, ಮೂಳೆ ಮುರಿತಕ್ಕೆ ಒಳಗಾದವರಿಗೆ ಅದರಲ್ಲೂ ಕಲ್ಯಾಟ ಕರ್ನಾಟಕ ಭಾಗದ ಜನರಿಗೆ ವೈದ್ಯರು ನೀಡುವ ಮೊದಲ ಸಲಹೆ ನಾಟಿ ಕೋಳಿ ಮೊಟ್ಟೆ ತಿನ್ನಿ ಎಂದು. ಆಗ ಮೊಟ್ಟೆ ತರಲು ಪರ ಊರನ್ನು ಅವಲಂಬಿಸಬೇಕೆ? ದೇವರು ಮತ್ತು ನಂಬಿಕೆ ನಮ್ಮೊಳಗಿನ ಬೆಳಕಾಗಬೇಕು. ಅದುಬಿಟ್ಟು, ಇರುವ ಬೆಳಕಿನ ಬದುಕನ್ನು ಕತ್ತಲಾಗಿಸುವಂತೆ ಇರಬಾರದು.

ADVERTISEMENT

- ಸಂಜೀವ್ ಜಗ್ಲಿ, ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.