ADVERTISEMENT

ದೇಶ ಕಟ್ಟುವವರಿಗೆ ಲಸಿಕೆಯಷ್ಟೇ ಸಾಕೆ?

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 19:31 IST
Last Updated 12 ಸೆಪ್ಟೆಂಬರ್ 2021, 19:31 IST

ಕಟ್ಟಡ ಕಾರ್ಮಿಕರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕುವ ಸರ್ಕಾರಿ ಯತ್ನ ಶ್ಲಾಘನೀಯವಾದುದು. ಆದರೆ ಕಾರ್ಮಿಕರ ದೃಷ್ಟಿಯಲ್ಲಿ ನೋಡಿದರೆ ಲಸಿಕೆ ಅವರ ಕೊನೆಯ ಆದ್ಯತೆಯೇ ಆಗಿರಬಹುದು. ಈ ಮಳೆಗಾಲದಲ್ಲಿ ಅವರು ಪ್ಲಾಸ್ಟಿಕ್‌ ಟೆಂಟ್‌ ಒಳಗೆ ಮುದುರಿ ಮಲಗಿ ಎದ್ದು, ಬೆಳಿಗ್ಗೆ ಒದ್ದೆ ಒಲೆಗೆ ಪ್ಲಾಸ್ಟಿಕ್‌ ತುರುಕಿ ಬೆಂಕಿ ಹೊತ್ತಿಸಿ, ಪುಟ್ಟ ಮಕ್ಕಳನ್ನು ಸುತ್ತ ಕೂರಿಸಿ ಅಡುಗೆ ಮಾಡಿಕೊಳ್ಳುವುದು, ಪ್ಲಾಸ್ಟಿಕ್‌ ಬಾಟಲಿ ಹಿಡಿದು ಪೊದೆಯ ಹಿಂಬದಿ ದೇಹಬಾಧೆ ತೀರಿಸಿಕೊಳ್ಳುವುದು, ಎದ್ದು ಹೋಗುವಾಗ ಉರುವಲಕ್ಕೆಂದು ಟ್ರೀ ಗಾರ್ಡ್‌ಗಳನ್ನು ಕಿತ್ತು ಸಾಗಿಸುವುದು- ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಹುತೇಕ ಎಲ್ಲ ಎತ್ತರದ ಕಟ್ಟಡಗಳ ಬಳಿಯಲ್ಲಿ ಕಾಣುವ ದೃಶ್ಯ ಇದು.

ಉಳ್ಳವರಿಗಾಗಿ ಭವ್ಯ ಬಹುಮಹಡಿ ಕಟ್ಟುತ್ತ ಹೋಗುವ ಇವರ ಬದುಕನ್ನು ತುಸು ಸಹನೀಯ ಮಾಡಬಾರದೆ? ನಿರ್ಮಾಣ ನಡೆಯುವ ತಾಣದಲ್ಲಿ ಇವರಿಗೆಂದೇ ಉದ್ದುದ್ದ ಕಂಟೇನರ್‌ ಟ್ರಾಲಿಗಳು ನಿಂತಿರುವುದನ್ನು ಸುಧಾರಿತ ದೇಶಗಳಲ್ಲಿ ನಾನು ನೋಡಿದ್ದೇನೆ. ರೈಲು ಬೋಗಿಯಂತಿರುವ ಅಂಥ ಟ್ರಾಲಿಗಳಲ್ಲಿ ಕಾರ್ಮಿಕರಿಗೆ ತೀರ ಅಗತ್ಯವಾದ ಶುದ್ಧನೀರು, ಅಡುಗೆ, ಶೌಚ ಮತ್ತು ಆಸರೆಯ ವ್ಯವಸ್ಥೆ ಇರುತ್ತದೆ. ಕಟ್ಟಡ ನಿರ್ಮಾಣ ಕೆಲಸ ಮುಗಿಯವವರೆಗೆ ಅಂಥ ಕೆರವಾನ್‌ ಟ್ರಾಲಿಗಳನ್ನು ಶ್ರಮಿಕರ ಅನುಕೂಲಕ್ಕೆಂದು ಗುತ್ತಿಗೆದಾರರು ಕಡ್ಡಾಯ ನಿಲ್ಲಿಸಿರಬೇಕೆಂದು ಕಾರ್ಮಿಕ ಇಲಾಖೆ ತಾಕೀತು ಮಾಡಬಾರದೇಕೆ? ಅದನ್ನು ನಿತ್ಯ ಚೊಕ್ಕಟ ಇಡುವ ಹೊಣೆಯನ್ನು ನಗರಪಾಲಿಕೆ ಹೊರಬೇಕು. ಬೇಕಿದ್ದರೆ ಕಾನೂನಿನಲ್ಲಿ ಚಿಕ್ಕ ಬದಲಾವಣೆಯನ್ನೂ ಮಾಡಬಹುದು. ಬೆಂಗಳೂರಿನಲ್ಲಿ ಇಂಥ ವ್ಯವಸ್ಥೆ ಜಾರಿಗೆ ಬಂದರೆ ದೇಶಕ್ಕೇ ಅದು ಮಾದರಿಯಾಗಬಹುದು. ಮಹಾನ್‌ ದೇಶ ಕಟ್ಟುವುದೆಂದರೆ ತೀರ ಕೆಳಹಂತದಲ್ಲೂ ತುಸು ಮಾನವೀಯ ಕಳಕಳಿ ಮತ್ತು ಪರಿಸರ ಪ್ರಜ್ಞೆಯನ್ನು ಪ್ರದರ್ಶಿಸಬೇಕಲ್ಲವೆ?

– ಚಿದಂಬರ ಸಿ. ಶೀತಲಬಾವಿ,ಕೆಂಗೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.