ADVERTISEMENT

ಟೀಕೆ ಪ್ರಜೆಗಳ ಸಾಂವಿಧಾನಿಕ ಹಕ್ಕು

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST

ಪ್ರಧಾನಿಯನ್ನು ಟೀಕಿಸಿದ್ದಕ್ಕೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ, ಸಾಹಿತಿಯನ್ನು, ಅದೂ ವಯೋವೃದ್ಧರನ್ನು ಠಾಣೆಗೆ ಕರೆಸಿದ್ದು ಸರಿಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ! ಹಾಗಾದರೆ ಎಳೆಯ ವಯಸ್ಸಿನ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಇದೇ ತೆರನಾದ ಟೀಕೆಯ ಕಾರಣದಿಂದ ಠಾಣೆಗೆ ಕರೆಸಬಹುದೇ? ಪೊಲೀಸ್ ಕೇಸು ದಾಖಲಿಸಬಹುದೇ? ಇಲ್ಲಿ ಅಭಿವ್ಯಕ್ತಿಯ ಹಕ್ಕು ಮುಖ್ಯವಾಗಬೇಕೇ ಹೊರತು ವಯಸ್ಸು ಅಥವಾ ಸ್ಥಾನಮಾನವಲ್ಲ. ಸರ್ಕಾರವನ್ನು, ಪ್ರಧಾನಿಯನ್ನು ಟೀಕಿಸುವುದು ಈ ದೇಶದ ಪ್ರಜೆಗಳೆಲ್ಲರ ಸಾಂವಿಧಾನಿಕ ಹಕ್ಕು. ಯಾರ ಸಾಂವಿಧಾನಿಕ ಹಕ್ಕಿನ ಮೇಲೆ ಹಲ್ಲೆ ನಡೆದರೂ ಅದು ನೇರವಾಗಿ ಸಂವಿಧಾನದ ಮೇಲಿನ ಹಲ್ಲೆ.

ಹಾಗೆ ನೋಡಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಆರಂಭವಾಗಿ ಬಹಳ ಕಾಲವಾಯಿತು. ಸಿಎಎ ವಿರುದ್ಧ ಕವಿತೆ ಓದಿದ್ದಕ್ಕೆ ಕವಿಯ ಮೇಲೆ ಕೇಸು ದಾಖಲಿಸಿದ್ದು, ಶೃಂಗೇರಿ ಸಾಹಿತ್ಯ ಸಮ್ಮೇಳನವನ್ನು ಬಲವಂತವಾಗಿ ನಿಲ್ಲಿಸಿದ್ದು, ಪಾಕಿಸ್ತಾನ ಪರ ಜೈಕಾರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಿದ್ದು ಇವೆಲ್ಲ ನೆನಪಿವೆಯೇ? ಹೀಗೆ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯ ರೋಗಲಕ್ಷಣ ಗೋಚರಿಸಿದಾಗ ಈ ನಾಡಿನ ಎಷ್ಟು ಮಂದಿ ಸಾಹಿತಿಗಳು, ಚಿಂತಕರು ಪ್ರತಿಭಟನೆಯ ಸೊಲ್ಲೆತ್ತಿದರು? ಆಗ ವಹಿಸಿದ ದಿವ್ಯ ಮೌನದ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅದಕ್ಕೆ ಹಂಪನಾ ಪ್ರಕರಣ ಅತ್ಯುತ್ತಮ ಉದಾಹರಣೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಶ್ರೀನಿವಾಸ ಕಾರ್ಕಳ,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.