ADVERTISEMENT

ಕೋಟಿ ಎಂದರೆ ಸಂಖ್ಯೆಯಲ್ಲ...

ಡಾ.ದೇವಿದಾಸ ಎಸ್‌.ಪ್ರಭು
Published 3 ಏಪ್ರಿಲ್ 2019, 19:46 IST
Last Updated 3 ಏಪ್ರಿಲ್ 2019, 19:46 IST

ಹಿಂದೂಗಳಿಗೆ 33 ಕೋಟಿ ದೇವತೆಗಳಿದ್ದಾರೆಂದು ಹೇಳಿರುವ ಅನಂತಕುಮಾರ ಹೆಗಡೆ ಅವರಿಗೆ (ಪ್ರ.ವಾ., ಏ. 3) ಹಿಂದೂ ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ ಎನ್ನುವುದು ಸಾಬೀತಾಗುತ್ತದೆ. ಸಂಸ್ಕೃತದಲ್ಲಿ ಕೋಟಿ ಎಂದರೆ ವಿಧ ಅಥವಾ ಪ್ರಕಾರ ಎಂದಾಗುತ್ತದೆ (ಉಚ್ಚಕೋಟಿಯ ಗೋವು, ಅಶ್ವ ಇತ್ಯಾದಿ). ಉಪನಿಷತ್ತುಗಳಲ್ಲಿರುವ 33 ಕೋಟಿ ದೇವತಾ ಅನ್ನುವುದನ್ನು ಅಲ್ಪ ಸಂಸ್ಕೃತ ಜ್ಞಾನ ಹೊಂದಿದ್ದ ಬ್ರಿಟಿಷ್‌ ಪಂಡಿತರು ಅಪಪ್ರಚಾರ ಮಾಡಿದರು. ಇದನ್ನು ಜನಸಾಮಾನ್ಯರೂ ನಂಬಿದರು.

ಹಿಂದೂ ಪುರಾಣಗಳ ಪ್ರಕಾರ, ಕಶ್ಯಪ ಮುನಿಗೆ ದಿತಿ ಹಾಗೂ ಆದಿತಿ ಎನ್ನುವ ಇಬ್ಬರು ಪತ್ನಿಯರು. ದಿತಿಯ ಮಕ್ಕಳು ದಾನವರಾದರೆ, ಆದಿತಿಯ ಮಕ್ಕಳು ದೇವತೆಗಳು ಎನಿಸಿಕೊಂಡರು. ಆದಿತಿಗೆ ಕೇವಲ 33 ಮಕ್ಕಳು. ಇವರ ಸಂಖ್ಯೆ 33 ಕೋಟಿಯಾಗಲು ಹೇಗೆ ಸಾಧ್ಯ? ಬೃಹದಾರಣ್ಯಕ ಉಪನಿಷತ್ತಿನಲ್ಲಿ, ಎಷ್ಟು ದೇವತೆಗಳಿದ್ದಾರೆ ಎಂದು ಯಾಜ್ಞವಲ್ಕ್ಯ ಗುರುವನ್ನು ಕೇಳಿದಾಗ ಅವರು 33 ಕೋಟಿ (ವಿಧ) ಎಂದು ಹೇಳುತ್ತಾರೆ. ಅವರು ಮುಂದುವರಿದು ಹೇಳುತ್ತಾರೆ ‘33 ಕೋಟಿ (ವಿಧ) ಎಂದರೆ ಅಷ್ಟ ವಸ್ತುಗಳು (ಭೂಮಿ, ಆಕಾಶ, ಜಲ, ಅಗ್ನಿ, ವಾಯು, ಸೂರ್ಯ, ಚಂದ್ರ ಮತ್ತು ನಕ್ಷತ್ರ), 11 ರುದ್ರರು (10 ಪ್ರಾಣಗಳು ಮತ್ತು ಒಂದು ಆತ್ಮ), 12 ಆದಿತ್ಯರು (12 ತಿಂಗಳು), ಒಬ್ಬ ಇಂದ್ರ ಮತ್ತು ಒಬ್ಬ ಪ್ರಜಾಪತಿ ಹೀಗೆ ಒಟ್ಟು 33 ಪ್ರಕಾರದ ದೇವತೆಗಳು. ಈ ಎಲ್ಲ ದೇವತೆಗಳಿಗೆ ಅಧಿಪತಿ ಒಬ್ಬನೇ ಮಹಾದೇವ. ಅವನನ್ನು ಮಾತ್ರ ಪೂಜಿಸಬೇಕು ಎಂದು ಹೇಳುತ್ತಾರೆ. ಹಿಂದೂ ಧರ್ಮದ ಪ್ರವಾದಿಗಳಂತೆ ವರ್ತಿಸುವವರು ಮೊದಲು ಹಿಂದೂ ಧರ್ಮವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT