ADVERTISEMENT

ಅಪಾಯಕಾರಿ ಸಲಹೆ!

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 16:27 IST
Last Updated 2 ಅಕ್ಟೋಬರ್ 2018, 16:27 IST

ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ನಿಗದಿ ಮಾಡುವಂತೆ ಒತ್ತಾಯಿಸಿ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಇದು ಅತ್ಯಂತ ಮಾರಕ ಎನಿಸಬಹುದಾದ ಚಿಂತನೆ.

ಈಗಾಗಲೇ ಸರ್ಕಾರದ ಯಾವ ಜನಪರ ಕೆಲಸವೂ ಸಕಾಲದಲ್ಲಿ ಆಗುತ್ತಿಲ್ಲ. ಸರ್ಕಾರಿ ಸೌಲಭ್ಯವನ್ನು ಪಡೆಯಬೇಕಾದರೆ ನಾಗರಿಕರು ಕಚೇರಿಗೆ ಅಲೆದು ಅಲೆದು ಚಪ್ಪಲಿ ಸವೆಸಬೇಕಾಗುತ್ತದೆ. ಸಾಲು ಸಾಲು ರಜೆಗಳು ಬಂದರಂತೂ ಸರ್ಕಾರಿ ಕಚೇರಿಗಳು ಖಾಲಿ ಖಾಲಿ ಇರುತ್ತವೆ. ಹೀಗಿರುವಾಗ ಸರ್ಕಾರಿ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವುದೆಂದರೆ ಜನರಿಗೆ ತೊಂದರೆ ಕೊಡುವುದೆಂದೇ ಅರ್ಥ. ಕಂದಾಯ ಇಲಾಖೆಯ ಯಾವುದಾದರೂ ಕಚೇರಿಗೆ ಭೇಟಿಕೊಟ್ಟರೆ ಪ್ರಿಯಾಂಕ್‌ ಅವರಿಗೆ ಸತ್ಯದ ದರ್ಶನವಾಗುತ್ತದೆ.

ತನ್ನ ಅಧಿಕಾರದ ಅವಧಿಯಲ್ಲಿ ಏನನ್ನಾದರೂ ಮಾಡಬೇಕೆಂಬ ಹುಚ್ಚು ಆಸೆಯ ಈಡೇರಿಕೆಗಾಗಿ, ಜನರಿಗೇಕೆ ಹಿಂಸೆ ಕೊಡಬೇಕು? ಜನರ ಕಷ್ಟ– ಸುಖಗಳ ಬಗ್ಗೆ ತಿಳಿವಳಿಕೆ ಇಲ್ಲದವರಿಗೆ ಅಧಿಕಾರ ಕೊಟ್ಟರೆ ಅದರ ಫಲವನ್ನು ಜನರೇ ಅನುಭವಿಸಬೇಕಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ADVERTISEMENT

– ದೊರೆಸ್ವಾಮಿ ಬಿ.ಎನ್., ಗದ್ದೆ ಬಿಂಡೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.