ADVERTISEMENT

ವಾಚಕರ ವಾಣಿ: ಪ್ರಬಲ ಪ್ರತಿಪಕ್ಷ ಬೇಕು, ಆದರೆ...

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:30 IST
Last Updated 5 ಜೂನ್ 2022, 19:30 IST

‘ಪ್ರಜಾಪ್ರಭುತ್ವ ಬಲಗೊಳ್ಳಲು ವಂಶಾಡಳಿತ ರಾಜಕಾರಣದಿಂದ ಹೊರತಾದ ಪ್ರಬಲ ಪ್ರತಿಪಕ್ಷ ಅತ್ಯಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ (ಪ್ರ.ವಾ., ಜೂನ್ 4) ಹೇಳಿದ್ದಾರೆ. ಅದು ಸರಿ. ಆದರೆ ಪ್ರತಿಪಕ್ಷಗಳು ಪ್ರಬಲವಾಗಿ ಬೆಳೆಯುವುದಾದರೂ ಹೇಗೆ? ಆಳುವ ಪಕ್ಷವು ಎಂಟು ವರ್ಷಗಳಿಂದ ಪ್ರತಿಪಕ್ಷಗಳ ಬುಡಕ್ಕೆ ಬಿಸಿ ನೀರೆರೆಯುತ್ತಾ ಧರ್ಮರಾಜಕಾರಣವನ್ನು ಮುಂದೊತ್ತಿ ಅಧಿಕಾರ ನಡೆಸುತ್ತಿದೆಯಲ್ಲವೇ? ಪ್ರತಿಪಕ್ಷಗಳು ಲೋಕಸಭೆಯಲ್ಲಿ ತಲೆಯೆತ್ತಲೂ ಬಿಡುತ್ತಿಲ್ಲ. ಉದಾಹರಣೆಗೆ, ನೋಟು ರದ್ದತಿ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದು, ಪೌರತ್ವ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆ ತಿದ್ದುಪಡಿ ಮಸೂದೆಯಂತಹ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ಕೊಡಲಿಲ್ಲ. ಸುಗ್ರೀವಾಜ್ಞೆ ಮೂಲಕ ಕೆಲವು ಕಾಯ್ದೆಗಳನ್ನು ಜಾರಿಗೊಳಿಸಲಾಯಿತು.

ಕೊರೊನಾ ಕಾಲಘಟ್ಟದಲ್ಲಿ ಅವಸರದಲ್ಲಿ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ದಿಡ್ಡಿ ಬಾಗಿಲಿನಲ್ಲಿ ರೈತರು ಒಂದು ವರ್ಷ ಪೂರ್ತಿ ಧರಣಿ ಸತ್ಯಾಗ್ರಹ ಹೂಡಿ ಅಪಾರ ಕಷ್ಟ ನಷ್ಟ ಅನುಭವಿಸಿದರು. ಅವರನ್ನು ಸೌಜನ್ಯಕ್ಕಾದರೂ ಪ್ರಧಾನಿ ಭೇಟಿ ಮಾಡಲಿಲ್ಲ. ಕೊನೆಗೆ ಉತ್ತರಪ್ರದೇಶ, ಪಂಜಾಬ್ ಮುಂತಾದ ರಾಜ್ಯಗಳ ಚುನಾವಣೆ ಹತ್ತಿರ ಬಂದಾಗ ಬೇಷರತ್ತಾಗಿ ಆ ಕಾಯ್ದೆಗಳನ್ನು ಹಿಂಪಡೆಯಲಾಯಿತು.

ಈಗಲೂ ದೇಶದ ಹಲವೆಡೆ ಕೋಮು ಘರ್ಷಣೆಗಳು, ಮಹಿಳೆಯರ ಮೇಲೆ ಅತ್ಯಾಚಾರಗಳು, ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕಾಶ್ಮೀರ ಕಣಿವೆಯಲ್ಲಿ ಹಿಂದೂ ಅಲ್ಪಸಂಖ್ಯಾತ ಪಂಡಿತ ವರ್ಗ ಅಭದ್ರತೆ ಎದುರಿಸುತ್ತಿದೆ. ಪ್ರಸ್ತುತ ದೇಶದಲ್ಲಿ ಕಿಡಿ ಹಾರಿಸುವ ಕೋಮು ಗಲಭೆಗಳನ್ನು ಆರಂಭದಲ್ಲೇ ಚಿವುಟಿಹಾಕಿ, ಮಸೀದಿಗಳಲ್ಲಿ ಮಂದಿರದ ತಡಕಾಟವನ್ನು ನಿಲ್ಲಿಸಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವತ್ತ ಸರ್ಕಾರವು ದೃಢ ಹೆಜ್ಜೆ ಇಡಬೇಕು. ತಾತ್ಪರ್ಯ, ಯಾವ ಕಾರಣಕ್ಕೂ ರಾಜಕೀಯದಲ್ಲಿ ಧರ್ಮ ಬೆರೆಯಬಾರದು. ಆಗ ಪ್ರತಿಪಕ್ಷಗಳು ತಾವಾಗಿಯೇ ಬಲಗೊಳ್ಳುತ್ತವೆ, ಜನತಂತ್ರ ಗಟ್ಟಿಗೊಳ್ಳುತ್ತದೆ ಮತ್ತು ಅಚ್ಛೇ ದಿನ ಬಂದೇ ಬರುತ್ತದೆ.

ADVERTISEMENT

–ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.