ADVERTISEMENT

ಯಾವುದು ಶ್ರಮದ ಮೌಲ್ಯ?

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST

ಕೂಲಿ ಕಾರ್ಮಿಕರ ನಡುವೆ ವೇತನದಲ್ಲಿ ಲಿಂಗತಾರತಮ್ಯ ಸಹಜ ಎಂದು ಜಿ.ಎಚ್.ವೆಂಕಟೇಶಮೂರ್ತಿ ಅವರು ಬರೆದಿದ್ದಾರೆ (ವಾ.ವಾ., ಏ. 6). ಶ್ರಮದ ಮೌಲ್ಯ ನಿರ್ಧರಿಸುವುದು ಎತ್ತುವ ಭಾರವೋ? ಸುರಿಸುವ ಬೆವರೋ? ವಿನಿಯೋಗಿಸುವ ಸಮಯವೋ? ಅಥವಾ ಕೆಲಸದ ಉಪಯುಕ್ತತೆಯೋ? ಭಾರ-ಸಮಯ- ಉಪಯುಕ್ತತೆಯೇ ಮಾನದಂಡವಾಗಿದ್ದಲ್ಲಿ ಇವತ್ತು ಅತಿಹೆಚ್ಚು ಕೂಲಿಯು ಮಲದಗುಂಡಿಗೆ ಇಳಿಯುವ ಸಫಾಯಿ ಕರ್ಮಚಾರಿಗಳಿಗೆ, ಕಲ್ಲುಮಣ್ಣು ಇಟ್ಟಿಗೆ ಹೊರುವವರಿಗೆ, ಗಣಿ ಕೆಲಸದವರಿಗೆ, ಬಸುರಿನ ಭಾರದ ಜೊತೆಗೆ ದುಡಿಯುವ ಹೆಣ್ಣುಗಳಿಗೆ ಸಿಗಬೇಕಿತ್ತು. ವಿಪರ್ಯಾಸವೆಂದರೆ, ಭಾರತದಲ್ಲಿ ಶ್ರಮದ ಕೆಲಸ ಕೀಳು, ಅದಕ್ಕೆ ಅತಿಕಡಿಮೆ ವೇತನ. ವಿರಾಮದಲ್ಲಿ ಮಾಡುವ ಬೌದ್ಧಿಕ ಕೆಲಸಗಳಿಗೆ ಕೈತುಂಬ ಸಂಬಳ. ಇನ್ನು ಹೆಣ್ಣು ದುಡಿಮೆಯನ್ನಂತೂ ಕೇಳುವಂತೇ ಇಲ್ಲ.

ಮಹಿಳೆಯರು ಕೆಲಸದ ಸ್ಥಳಕ್ಕೆ ಹೋಗುವಾಗ ತೆರುವ ಬಸ್‍ಚಾರ್ಜಿಗೆ, ಕಡಿಮೆ ತಿಂದರೂ ಹೋಟೆಲಿಗೆ ಕೊಡುವ ಹಣಕ್ಕೆ ಇಲ್ಲದ ವ್ಯತ್ಯಾಸವು ಸಂಬಳದ ವಿಷಯ ಬಂದಾಗ ಎದ್ದುಕಾಣುತ್ತದೆ. 1976ರಲ್ಲಿ ಸಮಾನ ವೇತನ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದರೂ ಶೇ 20ರಷ್ಟು ವೇತನ ತಾರತಮ್ಯ ಇದೆ. ಮನೆಗೆಲಸವೂ ಸೇರಿ ಮಹಿಳಾ ದುಡಿಮೆಯ ಶೇ 66ರಷ್ಟು ವೇತನರಹಿತವಾಗಿದೆ. ಕಡಿಮೆ ಸಂಬಳ ಮತ್ತು ಪುಕ್ಕಟೆ ಕೆಲಸ ಮಾಡುವವರು ಮಹಿಳೆಯರೇ ಆಗಿದ್ದಾರೆ. ಹೀಗಿರುವಾಗ ಕಡಿಮೆ ಭಾರ ಎತ್ತಬಲ್ಲ ಮಹಿಳೆಯರಿಗೆ ಪುರುಷರಷ್ಟೇ ಸಂಬಳ ಕೊಟ್ಟರೆ ‘ಪಾಪರ್ ಆಗ್ತೀವಿ’ ಎಂದು ಯೋಚಿಸುವ ಸಮಾಜವು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯ.

-ಡಾ. ಎಚ್.ಎಸ್.ಅನುಪಮಾ, ಕವಲಕ್ಕಿ, ಹೊನ್ನಾವರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.