ADVERTISEMENT

ಎತ್ತರಕ್ಕೇರದ ಸುಶಿಕ್ಷಿತರು

ಗಣೇಶ ಆರ್
Published 19 ಫೆಬ್ರುವರಿ 2019, 20:00 IST
Last Updated 19 ಫೆಬ್ರುವರಿ 2019, 20:00 IST

ಲಿಂಗಾನುಪಾತದ ಪ್ರಮಾಣ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ (ಪ್ರ.ವಾ., ಫೆ. 20). ಸುಶಿಕ್ಷಿತರ ರಾಜ್ಯಗಳೆಂದು ಕರೆಯಲಾಗುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂತಹ ಬೆಳವಣಿಗೆ ಅತ್ಯಂತ ಕಳವಳಕಾರಿ.

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳು ಸಾಕ್ಷರತೆ ವಿಚಾರದಲ್ಲಿ ತುಂಬಾ ಮುಂದಿದ್ದರೂ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಕುಸಿತವಾಗಿರುವುದು ಆತಂಕಕಾರಿ. ಜನ ಸುಶಿಕ್ಷಿತರಾದಂತೆಲ್ಲಾ ಎತ್ತರೆತ್ತರಕ್ಕೆ ಏರಬೇಕೇ ಹೊರತು ಅಧಃಪತನ ಹೊಂದಬಾರದು. ಸರ್ಕಾರದ ಹಲವು ಯೋಜನೆ, ಪ್ರೋತ್ಸಾಹಕ್ಕೂ ಲಿಂಗಾನುಪಾತವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ಹಿಂದೆಲ್ಲಾ ಲಿಂಗಾನುಪಾತದ ಕುಸಿತಕ್ಕೆ ಅನಕ್ಷರತೆ, ಬಡತನದಂತಹ ಅಂಶಗಳನ್ನು ಕಾರಣವಾಗಿ ನೀಡಲಾಗುತ್ತಿತ್ತು. ಆದರೆ ಪರಿಸ್ಥಿತಿ ತುಂಬಾ ಬದಲಾಗಿದೆ. ಅನಕ್ಷರತೆ, ಬಡತನಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಹೆಣ್ಣುಮಕ್ಕಳಿಗಿರುವ ಅಭದ್ರತೆಯೇ ಮುಖ್ಯ ಕಾರಣವಾಗಿ ತೋರುತ್ತಿದೆ. ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಹಲವಾರು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕುವುದು ಇನ್ನೂ ಮರೀಚಿಕೆಯೇ ಆಗಿದೆ. ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ಧೈರ್ಯ ತುಂಬುವುದಕ್ಕಿಂತ ಹೆಚ್ಚಾಗಿ, ಇರುವ ಮನೋಸ್ಥೈರ್ಯವನ್ನು ಕುಂದಿಸುವುದರಲ್ಲೇ ಹೆಚ್ಚಿನ ಆಸ್ಥೆ ವಹಿಸುತ್ತಿರುವುದು ಸುಶಿಕ್ಷಿತ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.