ADVERTISEMENT

ಜಿಎಚ್‍ಐ ಸರಿಯಿಲ್ಲ; ಆದರೆ ಸಮೀಕ್ಷೆ ವರದಿ!

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 19:30 IST
Last Updated 19 ಅಕ್ಟೋಬರ್ 2021, 19:30 IST

ಭಾರತ ಸರ್ಕಾರವು ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‍ಐ) ವಿಧಾನವನ್ನು ಅಧಿಕೃತವಾಗಿ ಪ್ರಶ್ನೆ ಮಾಡಿ, ಸೂಚ್ಯಂಕದಲ್ಲಿ ಭಾರತದ ಸ್ಥಾನವು 2021ರಲ್ಲಿ ಕುಸಿದಿದೆ ಎಂಬುದಕ್ಕೆ ತನ್ನ ಭಿನ್ನಾಭಿಪ್ರಾಯವನ್ನು ಪ್ರಕಟಿಸಿದೆ (ಪ್ರ.ವಾ., ಅ. 16). ಸರ್ಕಾರದ ಈ ನಿಲುವನ್ನು ತಾತ್ಪೂರ್ತಿಕವಾಗಿ ಒಪ್ಪಿಕೊಂಡರೂ ಉಳಿಯುವ ಪ್ರಶ್ನೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 (ಎನ್‍ಎಫ್‍ಎಚ್‍ಎಸ್ 5) ವರದಿಯಲ್ಲಿನ ಫಲಿತಗಳನ್ನು ತಿರಸ್ಕರಿಸಲಾಗುತ್ತದೆಯೇ? ಇಲ್ಲಿದೆ ನಿಜವಾದ ಸಮಸ್ಯೆ.

ದೇಶದ ಸರಿಸುಮಾರು ಎಲ್ಲ ರಾಜ್ಯಗಳಲ್ಲಿಯೂ 6– 59 ವರ್ಷ ವಯೋಮಾನದವರಲ್ಲಿ ಮತ್ತು 15-49 ವರ್ಷ ವಯೋಮಾನದ ಮಹಿಳೆಯರಲ್ಲಿ ಅನೀಮಿಯಾ (ರಕ್ತಹೀನತೆ) 2015- 16ರಿಂದ 2019- 20ರಲ್ಲಿ ಏರಿಕೆಯಾಗಿರುವುದನ್ನು ಎನ್‍ಎಫ್‍ಎಚ್‍ಎಸ್ ತನ್ನ 5ನೆಯ ಸುತ್ತಿನ ಸಮೀಕ್ಷೆಯಲ್ಲಿ ದಾಖಲಿಸಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ಒಟ್ಟು ಮಕ್ಕಳಲ್ಲಿ ಮತ್ತು ಒಟ್ಟು ಮಹಿಳೆಯರಲ್ಲಿನ ಅನೀಮಿಯಾ ಪ್ರಮಾಣ 2015- 16ರಲ್ಲಿ ಕ್ರಮವಾಗಿ ಶೇ 60.9 ಮತ್ತು ಶೇ 45.3ರಷ್ಟಿದ್ದುದು 2019- 20ರಲ್ಲಿ ಕ್ರಮವಾಗಿ ಶೇ 65.5 ಮತ್ತು ಶೇ 49.4ಕ್ಕೇರಿದೆ. ಗುಜರಾತಿನಲ್ಲಿ ಇದು ಕ್ರಮವಾಗಿ ಶೇ 62 ಮತ್ತು ಶೇ 56.5ರಿಂದ ಶೇ 79.7 ಮತ್ತು ಶೇ 69ಕ್ಕೇರಿದೆ. ಇದು ಆತಂಕಕಾರಿ ಸ್ಥಿತಿಯಾಗಿದೆ.

ಅಪೌಷ್ಟಿಕತೆಯನ್ನು ಯುನಿಸೆಫ್‌ ‘ಮರೆಮಾಚಿದ ಹಸಿವು’ ಎಂದು ನಿರ್ವಚಿಸಿದೆ. ಭಾರತ ಸರ್ಕಾರ ತನ್ನದೇ ಸಚಿವಾಲಯದ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ದಾಖಲಾಗಿರುವ ಏರಿಕೆಯಾಗುತ್ತಿರುವ ಮರೆಮಾಚಿದ ಹಸಿವಿನ ಸಮಸ್ಯೆಯನ್ನು ತಿರಸ್ಕರಿಸುತ್ತದೆಯೇ?

ADVERTISEMENT

ಡಾ. ಟಿ.ಆರ್.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.