ADVERTISEMENT

ಆಧಾರರಹಿತ ಹೇಳಿಕೆ ಖಂಡನೀಯ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:01 IST
Last Updated 13 ಮೇ 2019, 20:01 IST

‘ಮಠಗಳು ಭಯೋತ್ಪಾದನಾ ಕೇಂದ್ರಗಳಾಗದಿರಲಿ’ ಎಂದು ಡಾ. ಹಂಪ ನಾಗರಾಜಯ್ಯ ಹೇಳಿದ್ದಾರೆ(ಪ್ರ.ವಾ., ಮೇ 13).ಕರ್ನಾಟಕದ ಹಿರಿಯ ವಿದ್ವಾಂಸರಾದ ಹಂಪನಾ ಅವರ ಈ ಹೇಳಿಕೆಯು ಬೇಜಾವಾಬ್ದಾರಿಯಿಂದ ಕೂಡಿದೆ ಹಾಗೂ ಆಧಾರರಹಿತ ಅನುಮಾನವನ್ನು ಹುಟ್ಟುಹಾಕುವಂತಿದೆ. ಉಗ್ರವಾದಿಗಳನ್ನು ಸೃಷ್ಟಿಸದೆ ಎಲ್ಲರನ್ನೂ ಪ್ರೀತಿಸುವ ಪ್ರವೃತ್ತಿ ಬೆಳೆಸಬೇಕು ಎನ್ನುವ ಕಾಳಜಿ ಒಪ್ಪಬಹುದಾದರೂ ಈ ಹೇಳಿಕೆಯ ಒಳಧ್ವನಿಯು ಮಠಗಳು ಈಗ ಭಯೋತ್ಪಾದಕರನ್ನು ಸೃಷ್ಟಿಸುತ್ತಿವೆ ಎಂಬಂತಿದೆ.

ಕರ್ನಾಟಕದಲ್ಲಿ ನೂರಾರು ಮಠಗಳು, ಆಶ್ರಮಗಳು ಕಾರ್ಯ ನಿರ್ವಹಿಸುತ್ತಿದ್ದು, ಯಾವ ಮಠದಿಂದಲೂ ಭಯೋತ್ಪಾದಕರು ಹುಟ್ಟಿರುವ ದಾಖಲೆಗಳು ಇಲ್ಲ. ಸಮಾಜದ ಸಾಮಾನ್ಯ ಜನರಿಗೂ ಹಲವು ಅನುಕೂಲಗಳನ್ನು ಒದಗಿಸಿಕೊಡುವಲ್ಲಿ ಮಠಗಳು ಮುಂಚೂಣಿಯಲ್ಲಿ ನಿಂತಿರುವ ನಿದರ್ಶನಗಳೇ ನಮ್ಮ ಕಣ್ಮುಂದೆ ಇವೆ.

ಶಿಕ್ಷಣ, ಆರೋಗ್ಯ, ಸಂಸ್ಕಾರ ನೀಡುತ್ತಾ ನಾಡಿನ ಗೌರವವನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಮಠ- ಆಶ್ರಮಗಳದ್ದು. ಹೀಗಿದ್ದರೂ ಈ ವಿದ್ವಾಂಸರು ಇಂತಹ ಆರೋಪದ ಜಾಗದಲ್ಲಿ ಮಠಗಳನ್ನು ನಿಲ್ಲಿಸಿದ್ದು ಖಂಡನೀಯ. ಒಂದು ವೇಳೆ ತಮ್ಮ ಮಾತಿಗೆಸಮರ್ಥನೆಯನ್ನು ನೀಡುವುದಾದರೆ ಅವರು ದಾಖಲೆಗಳನ್ನು ನೀಡಬೇಕು. ಇಲ್ಲವಾದರೆ ತಮ್ಮ ಹೇಳಿಕೆಯನ್ನು ಹಿಂಪಡೆದು ಸೂಕ್ತ ಸ್ಪಷ್ಟೀಕರಣ ನೀಡಲಿ.

ADVERTISEMENT

- ಡಾ. ರೋಹಿಣಾಕ್ಷ ಶಿರ್ಲಾಲು,ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.