ADVERTISEMENT

ವಾಚಕರ ವಾಣಿ: ಸಾವಿನ ಬಾಗಿಲು ತೆರೆದವರ ಚಿತ್ರಗಳು ಗೋಚರ!

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 19:02 IST
Last Updated 8 ಜೂನ್ 2025, 19:02 IST
   

ಸಾವಿನ ಬಾಗಿಲು ತೆರೆದವರ ಚಿತ್ರಗಳು ಗೋಚರ!

‘ಸಾವಿನ ಬಾಗಿಲು ತೆರೆದವರಾರು?’ (ಒಳನೋಟ, ಪ್ರ.ವಾ., ಜೂನ್ 8) ವರದಿಯನ್ನು ಓದುತ್ತಾ ಹೋದಾಗ 11 ಮಂದಿಯ ಜೀವ ಬಲಿ ತೆಗೆದುಕೊಂಡ ಕಾಲ್ತುಳಿತ ಪ್ರಕರಣದಲ್ಲಿ ಯಾರದು ಪ್ರತ್ಯಕ್ಷ ಪಾತ್ರವಿದ್ದೀತು ಮತ್ತು ಯಾರ ಪಾತ್ರ ತೆರೆಯ ಹಿಂದೆ ನಿಂತು ದುರಂತಕ್ಕೆ ಪರೋಕ್ಷವಾಗಿ ಕಾರಣವಾಯಿತು ಎನ್ನುವುದು ಲೇಖನದ ಮುಕ್ತಾಯ ಭಾಗಕ್ಕೆ ಬರುವಷ್ಟರಲ್ಲಿ ಸ್ಪಷ್ಟವಾಗುತ್ತದೆ. ಈ ಪ್ರಕರಣದ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಈ ತಿಂಗಳ 10ರಂದು ಕೋರ್ಟ್‌ನ ಮುಂದೆ ಪ್ರಕರಣವು ಮತ್ತೆ ವಿಚಾರಣೆಗೆ ಬರಲಿದೆ. ಆಗ ಯಾವ ಯಾವ ಸಂಗತಿಗಳು ಹೊರಬರಲಿವೆ ಎಂಬುದು ಕುತೂಹಲ ಮೂಡಿಸಿದೆ.

⇒ಸಾಮಗ ದತ್ತಾತ್ರಿ, ಬೆಂಗಳೂರು 

ADVERTISEMENT

ಶಹಬ್ಬಾಸ್ ಮಗಳೆ... 

ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಓದಿನಲ್ಲಿ, ಕ್ರೀಡೆಯಲ್ಲಿ ಮುಂದಿದ್ದಳು. ಇಂತಹ ಪ್ರಬುದ್ಧ ಬಾಲಕಿಯ ಮದುವೆಯನ್ನು ಅವಳ ಪಾಲಕರು, ಬಳಗದವರು ದಿಢೀರನೆ ಸೋದರ ಮಾವನೊಂದಿಗೆ ಹೂಡಿ ತಾಳಿ ಕಟ್ಟಲು ಒತ್ತಾಯಿಸಿದಾಗ ಆಕೆ ಪ್ರತಿಭಟಿಸಿದ್ದು ಹೊಡೆತ, ಬಡಿತಗಳನ್ನು ಸಹಿಸುತ್ತ ಪಾರಾದ ಸುದ್ದಿಯು (ಪ್ರ.ವಾ., ಜೂನ್ 7) ಇಡೀ ಮಹಿಳಾ ಸಮುದಾಯಕ್ಕೆ ಸ್ಫೂರ್ತಿ ತಂದಿದೆ. ವಿದ್ಯಾರ್ಥಿನಿಯ ಧೈರ್ಯ ಮತ್ತು ಸಾಹಸವು ಅಭಿನಂದನಾರ್ಹ.

⇒ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಬದಲಾದ ಚಿಂತನೆ

ಕನ್ನಡ ಭಾಷೆಯ ಬಳಕೆ ವಿಚಾರವು ಕರ್ನಾಟಕದಲ್ಲಿ ನೆಲಸಿರುವ ಉತ್ತರ ಭಾರತದವರು ಮತ್ತು ಕನ್ನಡಿಗರ ಮಧ್ಯೆ ಆಗಾಗ್ಗೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ನಡುವೆಯೇ ‘ಕರ್ನಾಟಕದಲ್ಲಿ ಉದ್ಯೋಗದಲ್ಲಿರುವವರು ಕನ್ನಡ ಕಲಿಯಬೇಕು ಮತ್ತು ಮಾತನಾಡಬೇಕು’ ಎಂದು ಉದ್ಯಮಿ ಮೋಹನದಾಸ್‌ ಪೈ ನೀಡಿರುವ ಹೇಳಿಕೆಯು ವರದಿಯಾಗಿದೆ.

ಕೆಲವು ಕಂಪನಿಯ ಅಧಿಕಾರಿಗಳು ಕನ್ನಡ ಕಲಿಯಲು ಆಸಕ್ತಿ ವಹಿಸದಿರುವುದು ಸರಿಯಲ್ಲ. ಇದು ಅನಗತ್ಯವಾಗಿ ಸಂಘರ್ಷಕ್ಕೆ ದಾರಿಯಾಗಲಿದೆ ಎಂದಿದ್ದಾರೆ. ಕನ್ನಡ ನಾಮಫಲಕ ಅಳವಡಿಕೆಯನ್ನು ಕಡ್ಡಾಯ ಮಾಡುವ ನಿರ್ಧಾರ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರದಲ್ಲಿ ಪೈ ಅವರು ವ್ಯತಿರಿಕ್ತ ಅಭಿಪ್ರಾಯ ತಳೆದಿದ್ದರು. ಆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಈಗ ಅವರ ಚಿಂತನೆಯು ಸ್ವಲ್ಪ ಬದಲಾದಂತೆ ಕಾಣುತ್ತಿದೆ. ಕನ್ನಡಪರ ಹೋರಾಟಗಾರರ ಕಾರ್ಯಸೂಚಿ ಹಿಂದಿರುವ ನೈಜ ಉದ್ದೇಶವು ಅವರಿಗೆ ತಡವಾಗಿಯಾದರೂ ಅರ್ಥವಾದಂತಿದೆ.

⇒ರಮಾನಂದ ಶರ್ಮಾ, ಬೆಂಗಳೂರು  

ನೌಕರರ ವರ್ಗಾವಣೆ: ಪಾರದರ್ಶಕತೆ ಮರೀಚಿಕೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪೊಲೀಸ್‌ ಅಧಿಕಾರಿಗಳ ಎತ್ತಂಗಡಿ ಮಾಡಿರುವುದರ ಬಗ್ಗೆ ಚರ್ಚೆ ನಡೆದಿದೆ.

ಅಧಿಕಾರಿಗಳು ಆಯಕಟ್ಟಿನ ಜಾಗ ಬಯಸಿ ರಾಜಕಾರಣಿಗಳ ಬಳಿ ಅಂಗಲಾಚುವ ಪರಿಸ್ಥಿತಿಯು ಇಂತಹ ಘಟನೆಗಳಿಗೆ ಕಾರಣವಾಗಬಲ್ಲದು. ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ಇಲ್ಲ. ಹಣ, ಜಾತಿ, ಪ್ರಭಾವ ಮೇಲುಗೈ ಸಾಧಿಸಿವೆ. ಇನ್ನಷ್ಟು ಜನರ ಪ್ರಾಣ ಹಾನಿ ತಪ್ಪಿಸುವ ದಿಸೆಯಲ್ಲಿ ಸರ್ಕಾರವು ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ

.⇒ಬಿ.ಬಿ.ಎಲ್. ಗೌಡ, ಬೆಂಗಳೂರು

ದಲಿತರಿಗೆ ಸಾಮಾಜಿಕ ಬಹಿಷ್ಕಾರ ಅಮಾನವೀಯ

ಮಂಡ್ಯ ಜಿಲ್ಲೆಯ ಎಲೆಚಾಕನಹಳ್ಳಿಯ ಮಾರಮ್ಮ ದೇವಿ ದೇವಾಲಯದಲ್ಲಿ ದಲಿತರು ಪೂಜೆ ಸಲ್ಲಿಸಿದ್ದಕ್ಕೆ ಆ ಗ್ರಾಮದ ಪ್ರಬಲ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ. ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು (ಪ್ರ.ವಾ., ಜೂನ್‌ 7) ಅಕ್ಷಮ್ಯ. 

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳೂವರೆ ದಶಕ ಉರುಳಿದರೂ ಇನ್ನೂ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿದರೆ ಇಂತಹ ಹೇಯ ಕೃತ್ಯಗಳು ಮರುಕಳಿಸುವುದು ತಪ್ಪಲಿದೆ. 

‌‌‌‌‌‌ಭಾರತವು ಶೀಘ್ರವೇ ಜಪಾನ್‌ ದೇಶವನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಕತೆಯಾಗಲಿದೆ ಎಂದು ರಾಜಕೀಯ ಧುರೀಣರು ಬೀಗುತ್ತಿದ್ದಾರೆ. ಅವರೆಲ್ಲರೂ ಸಮಾಜದಲ್ಲಿನ ಅಸಮಾನತೆ ನಿರ್ಮೂಲನೆಗೆ ಮುಂದಾಗಬೇಕಿದೆ. 

⇒ಸಂಜು, ಹೆಂದೊರೆ, ಶಿರಾ  

ಈ ಮನೋಧೋರಣೆ ಬದಲಾಗಲಿ  

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜಮೀನು ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಉಚಿತವಾಗಿ ಅಕ್ಕಿ ನೀಡುವುದರ ಜೊತೆಗೆ ಮಹಿಳೆಯರಿಗೆ ಉಚಿತವಾಗಿ ಹಣ ಕೊಡುತ್ತಿರುವುದರಿಂದ ಕೃಷಿ ಕೆಲಸಕ್ಕೆ ಯಾರೂ ಬರುತ್ತಿಲ್ಲ. ಕೈಯಲ್ಲಿ ಬ್ಯಾಗ್‌ ಹಿಡಿದು ಓಡಾಡುವವರ ಸಂಖ್ಯೆ ಹೆಚ್ಚಾಗಿದೆ (ಪ್ರ.ವಾ., ಜೂನ್ 8) ಎಂಬ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರ ಮಾತು, ಅವರ ಸ್ಥಾನ ಮತ್ತು ಹಿರಿತನಕ್ಕೆ ಶೋಭೆ ತರುವುದಿಲ್ಲ. ಇದು ಖಂಡನೀಯ.

ಈ ಹಿಂದೆ, 1911ರಲ್ಲಿ ಗೋಪಾಲಕೃಷ್ಣ ಗೋಖಲೆ ಅವರು ಅಂದಿನ ಇಂಪೀರಿಯಲ್ ಲೆಜಿಸ್ಲೇಟಿವ್‌ ಅಸೆಂಬ್ಲಿಯಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗಬೇಕೆಂದು ಮಸೂದೆ ಮಂಡಿಸಿದಾಗ, ಶಾಸನಸಭೆಯ ಬಹುತೇಕ ಸದಸ್ಯರು ‘ಎಲ್ಲಾ ಮಕ್ಕಳು ಶಾಲೆಗೆ ಹೋದರೆ, ನಮ್ಮ ಹೊಲ- ಗದ್ದೆಗಳಲ್ಲಿ ಕೆಲಸ ಮಾಡುವವರು ಯಾರು’ ಎಂಬ ಪ್ರಶ್ನೆ ಎತ್ತಿದ್ದರು. ಒಂದು ವರ್ಗದ ಜನ ಕೂಲಿ ಕೆಲಸಕ್ಕಾಗಿಯೇ ಇದ್ದಾರೆ ಎಂಬ ಈ ಮನೋಧೋರಣೆ ಬದಲಾಗಬೇಕು. ಈ ಬಗೆಯ ಅಸಹನೆ ಒಳ್ಳೆಯದಲ್ಲ.

⇒ನಿರಂಜನಾರಾಧ್ಯ ವಿ.ಪಿ., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.