ADVERTISEMENT

ವಾಚಕರ ವಾಣಿ | ಪೂರ್ವಭಾವಿ ಪರೀಕ್ಷೆಗೆ ಸಕಾಲವಲ್ಲ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಇದೇ 24ರಂದು ಪೂರ್ವಭಾವಿ ಪರೀಕ್ಷೆ ಏರ್ಪಡಿಸಿದೆ. ಪ್ರತೀ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಮಾತ್ರ ಅರ್ಜಿ ಕರೆಯಲಾಗುವ ಈ ಪರೀಕ್ಷೆಗೆ ಲಕ್ಷಾಂತರ ಮಂದಿ ಹಾಜರಾಗುತ್ತಾರೆ. ಆದರೆ ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್‌ಗಳು, ಪ್ರಥಮ ದರ್ಜೆ ಸಹಾಯಕರು, ಪಿಡಿಒಗಳು, ಆರೋಗ್ಯ ಅಧಿಕಾರಿಗಳು ಸೇರಿದಂತೆ ಹಲವರು ಈಗ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಗೆ ಶನಿವಾರ ಮತ್ತು ಭಾನುವಾರ ಸಹ ರಜೆ ಇರುವುದಿಲ್ಲ. ಇಂತಹವರಲ್ಲಿ ಹಲವರು ಈ ಬಾರಿ ಕೆಎಎಸ್‌ ಬರೆಯುವ ಆಕಾಂಕ್ಷಿಗಳಾಗಿದ್ದು, ಅವರಿಗೆ ಪರೀಕ್ಷೆ ಬರೆಯಲು ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿವೆ.

ಕೆಪಿಎಸ್‌ಸಿಯು ಆರೇಳು ಜಿಲ್ಲಾ ಕೇಂದ್ರಗಳಲ್ಲಷ್ಟೇ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಸಾರಿಗೆ ವ್ಯವಸ್ಥೆ ಉತ್ತಮವಾಗಿಲ್ಲದ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಜಿಲ್ಲಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಹೊರ ಜಿಲ್ಲೆಗಳ ಕೆಲವು ಅಭ್ಯರ್ಥಿಗಳು ಬೆಂಗಳೂರನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಸಹ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ. ಅಲ್ಲದೆ ಯುಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷಾ ಕೇಂದ್ರದ ಬದಲಾವಣೆಗೆ ಕೆಪಿಎಸ್‌ಸಿ ಅವಕಾಶ ನೀಡಿಲ್ಲ. ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಜಿಲ್ಲಾ ಕೇಂದ್ರಗಳಲ್ಲಿ ಮಳೆಯ ಆರ್ಭಟದಿಂದ ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟು ಸರ್ಕಾರ ಪರೀಕ್ಷೆಯನ್ನು ಕನಿಷ್ಠ ಒಂದು ಅಥವಾ ಎರಡು ತಿಂಗಳವರೆಗೆ ಮುಂದೂಡಬೇಕು.

-ಲಕ್ಷ್ಮಿಕಾಂತ್‌, ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.