ADVERTISEMENT

ಮಾತಿನ ಮೇಲೆ ಹಿಡಿತ ತಪ್ಪಿತೇ?

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 17:06 IST
Last Updated 19 ನವೆಂಬರ್ 2018, 17:06 IST

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತಿನ ಮೇಲೆ ಹಿಡಿತ ಕಳೆದುಕೊಂಡರೇ? ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆಡಿರುವ ಕೆಲವು ಮಾತುಗಳು ವಿವಾದಕ್ಕೆ ಒಳಗಾಗಿರುವುದನ್ನು ನೋಡಿದರೆ ಆ ಭಾವನೆ ಮೂಡುತ್ತದೆ.

‘ನಾನು ಕಾಂಗ್ರೆಸ್ ಪಕ್ಷದ ಹಂಗಿನಲ್ಲಿದ್ದೇನೆ, ರಾಜ್ಯದ ಜನತೆಯ ಹಂಗಿನಲ್ಲಿಲ್ಲ’ ಎಂಬ ಹೇಳಿಕೆಯ ಮೂಲಕ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅವರು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾದ ನಂತರ ಬಿಜೆಪಿ ಮುಖಂಡ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡುವ ಭರದಲ್ಲಿ ‘ರಾಜ್ಯದ ಜನರು ದಂಗೆ ಏಳಬೇಕಾಗುತ್ತದೆ’ ಎಂದು ಬೆದರಿಕೆ ಸ್ವರೂಪದ ಎಚ್ಚರಿಕೆ ನೀಡಿದರು. ಅವರು ಬಳಸಿದ ‘ದಂಗೆ’ ಪದದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದವು. ಈಗ ಪ್ರತಿಭಟನಾನಿರತ ಮಹಿಳೆಯೊಬ್ಬರನ್ನು ಉಲ್ಲೇಖಿಸಿ ‘ನಾಲ್ಕು ವರ್ಷ ಎಲ್ಲಿ ಮಲ್ಕೊಂಡಿದ್ದೆ’ ಎಂದು ಹೇಳಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಅಳೆದು ತೂಗಿ ಮಾತನಾಡಬೇಕಾಗುತ್ತದೆ. ಸಿಟ್ಟಿನ ಭರದಲ್ಲಿ ಹತೋಟಿ ಕಳೆದು
ಕೊಂಡು ಮಾತನಾಡಿದರೆ ಇಂಥ ಅವಾಂತರಗಳು ಸಂಭವಿಸುತ್ತವೆ. ತಾನು ಎರಡು ಪಕ್ಷಗಳ ಮುಖ್ಯಮಂತ್ರಿಯಲ್ಲ, ಇಡೀ
ರಾಜ್ಯದ ಮುಖ್ಯಮಂತ್ರಿ. ತನ್ನ ನಡೆ–ನುಡಿಗಳನ್ನು ಪ್ರಶ್ನಿಸುವ ಹಕ್ಕು ಈ ರಾಜ್ಯದ ಜನರಿಗೆ ಇದೆ ಎಂಬುದನ್ನು ಮುಖ್ಯ
ಮಂತ್ರಿ ಮನವರಿಕೆ ಮಾಡಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗದೆ, ಶಾಂತಚಿತ್ತದಿಂದ ಪ್ರತಿಕ್ರಿಯೆಗಳನ್ನು ನೀಡಬೇಕು. ಇಲ್ಲದಿದ್ದರೆ ಹೀಗೆ ಪದೇ- ಪದೇ ವಿವಾದದ ಕೇಂದ್ರಬಿಂದುವಾಗಿ ಜನರ ಟೀಕೆಗಳಿಗೆ ಒಳಗಾಗಬೇಕಾಗುತ್ತದೆ.

ADVERTISEMENT

ಗುರುರಾಜ ಪಾಟೀಲ, ನಾದ, ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.