ADVERTISEMENT

‘ಕನ್ನಡ ರಾಜ್ಯೋತ್ಸವ’ವೇ ಇರಲಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 19:45 IST
Last Updated 3 ನವೆಂಬರ್ 2022, 19:45 IST

‘ಕನ್ನಡ ರಾಜ್ಯೋತ್ಸವ’ವನ್ನು ‘ಕರ್ನಾಟಕ ರಾಜ್ಯೋತ್ಸವ’ ಎಂದು ಕರೆಯುವುದು ಸರಿ ಎಂಬ ಚಂದ್ರಕಾಂತ ವಡ್ಡು ಮತ್ತು ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ (ವಾ.ವಾ., ನ. 2 ಮತ್ತು 3) ಅವರ ವಾದ ತಾರ್ಕಿಕವಾಗಿ ಸರಿಯಲ್ಲ. ಕನ್ನಡ ಎಂಬ ಶಬ್ದ ಬರೀ ಭಾಷೆಯಲ್ಲ, ಅದು ನಾಡು ನುಡಿ, ಜನಾಂಗ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಕನ್ನಡ ನುಡಿ, ಕನ್ನಡ ನಾಡು, ಕನ್ನಡಿಗರು ಸರ್ವವೂ ಎನಿಸಿದೆ.

ಮೂಲತಃ ದ್ರಾವಿಡ ಭಾಷೆಯ ಕುಟುಂಬಗಳಲ್ಲಿ ತಮಿಳು ಭಾಷೆಯ ತರುವಾಯ ಕನ್ನಡಕ್ಕೆ ಎರಡನೆಯ ಸ್ಥಾನ. ಆನಂತರ ತೆಲುಗು ಮತ್ತು ಮಲಯಾಳಂ ಭಾಷೆಗಳದ್ದು. ತಮಿಳುನಾಡು, ತೆಲಂಗಾಣ, ಕೇರಳ (ಚೇರ) ಹೆಸರುಗಳು ದ್ರಾವಿಡ ಭಾಷೆಗೆ ಸಂಬಂಧಿಸಿದ್ದು ಅವು ಇಂದಿಗೂ ಸಂಸ್ಕೃತೀಕರಣಗೊಂಡಿಲ್ಲ. ‘ದ್ರಾವಿಡ’ ತಮಿಳು ಪದದ ಸಂಸ್ಕೃತೀಕರಣ ಶಬ್ದ. ಹಾಗೆಯೇ ಕರ್ಣಾಟ/ಕರ್ನಾಟಕ ಪದ ಶುದ್ಧ ಕನ್ನಡ ಪದದ ಸಂಸ್ಕೃತೀಕರಣ ಎಂಬುದು ಸರ್ವವಿದಿತ. ಅಂತೆಯೇ ಕನ್ನಡದಲ್ಲಿ ‘ಕರ್ನಾಟಕ’ ಇದೆಯೇ ವಿನಾ ಕರ್ನಾಟಕದಲ್ಲಿ ಕನ್ನಡವಲ್ಲ. ‘ಕನ್ನಡ ಶಾಸ್ತ್ರೀಯಭಾಷೆ’ ಎಂದು ಈಗಾಗಲೇ ಕನ್ನಡದ ಮುದ್ರೆ ಬಿದ್ದಿದೆ. ಹೀಗಿದ್ದು ಕರ್ನಾಟಕ ಭಾಷೆಯಲ್ಲಿ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳೊಂದಿಗೆ ಕನ್ನಡ ಭಾಷೆಯನ್ನು ಸೇರಿಸಿರುವುದು ಭಾಷಾ ಜ್ಞಾನದ ಕೊರತೆ ಎನಿಸಿದೆ. ಕನ್ನಡ ಭಾಷೆಗೆ ಭವ್ಯ ಪರಂಪರೆ ಇರುವುದರಿಂದ ‘ಕನ್ನಡ ರಾಜ್ಯೋತ್ಸವ’ ಸರಿಯಾಗಿದೆ.

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.