ADVERTISEMENT

ವಾಚಕರ ವಾಣಿ: ಸರ್ಕಾರಿ ಯೋಜನೆ ನಿಷ್ಕ್ರಿಯಗೊಳ್ಳದಿರಲಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 19:30 IST
Last Updated 28 ಆಗಸ್ಟ್ 2020, 19:30 IST

ಅಕ್ರಮವಾಗಿ ಹಣ ಗಳಿಸಬೇಕು ಎನ್ನುವ ಮನಃಸ್ಥಿತಿಯವರಿಗೆ, ಇದು ಶೋಷಿತರ, ದಮನಿತರ ಹಣ ಎಂಬ ಭೇದ ಇರದು. ಇದಕ್ಕೆ ಅಂಬೇಡ್ಕರ್‌, ಅರಸು, ವಾಲ್ಮೀಕಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳ ಮೇಲೆ ಎಸಿಬಿ ಇತ್ತೀಚೆಗೆ ನಡೆಸಿರುವ ದಾಳಿ ತಾಜಾ ಉದಾಹರಣೆ. ನಿಗಮಗಳ ಅಧಿಕಾರಿಗಳ ಬಗ್ಗೆ ದೂರುಗಳು ಬಂದಿದ್ದರಿಂದ ಈ ದಾಳಿ ನಡೆದಿದೆ. ಗಂಗಾ ಕಲ್ಯಾಣ ಯೋಜನೆ ಸೌಲಭ್ಯಕ್ಕೆ ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡುತ್ತಾರೆ. ಸಹಜವಾಗಿಯೇ ಅವರು ತಮ್ಮ ಮತದಾರರು ಮತ್ತು ಹಿಂಬಾಲಕರಿಗೆ ಆದ್ಯತೆ ನೀಡಬೇಕಾಗುತ್ತದೆ. ಅದೇ ಸ್ಥಳೀಯ ಮದ್ಯಸ್ಥಿಕೆದಾರನೊಬ್ಬನಿಗೆ ₹ 25 ಸಾವಿರ ನೀಡಿದರೆ, ಯಾವ ಗೊಡವೆಯೂ ಇಲ್ಲದೆ ಗಂಗಾ ಕಲ್ಯಾಣ ಕೊಳವೆ ಬಾವಿ ಮಂಜೂರಾಗುತ್ತದೆ.

ಕೋವಿಡ್ -19 ಸಂಕಷ್ಟಕ್ಕೆ ಒಳಗಾದ ಟ್ಯಾಕ್ಸಿ ಚಾಲಕರಿಗಾಗಿ ಸರ್ಕಾರ ₹ 5 ಸಾವಿರ ಪರಿಹಾರ ಘೋಷಿಸಿತು. ಆದರೆ ಪ್ರವಾಸೋದ್ಯಮ ಮತ್ತಿತರ ನಿಗಮಗಳಿಂದ ವಾಹನ ಪಡೆದವರು ಯಾರೂ ಟ್ಯಾಕ್ಸಿ ಡ್ರೈವರ್‌ಗಳಲ್ಲ. ನಿಜವಾದ ಟ್ಯಾಕ್ಸಿ ಡ್ರೈವರ್‌ಗಳು ಅರ್ಜಿ ಹಾಕಲು ಅವರ ಬಳಿ ವಾಹನಗಳಿಲ್ಲ. ಸರ್ಕಾರ ರೂಪಿಸುವ ಯೋಜನೆಗಳು ಮೇಲ್ನೋಟಕ್ಕೆ ಉತ್ತಮವಾಗಿರುತ್ತವೆ. ಆದರೆ ಅವು ಅರ್ಹರಿಗೆ ದೊರೆಯದೆ ಅಧಿಕಾರಿಗಳ ಕರಾಮತ್ತಿನಿಂದ ನಿಷ್ಕ್ರಿಯಗೊಂಡು ಬೇರೆಯದೇ ಸ್ವರೂಪ ಪಡೆಯುತ್ತವೆ. ಇದಕ್ಕೆ ಬರೀ ನೌಕರ ವರ್ಗ ಅಷ್ಟೇ ಅಲ್ಲ, ಜನಪ್ರತಿನಿಧಿಗಳು ಸಹ
ಕಾರಣರಾಗುತ್ತಾರೆ.

-ತಿಮ್ಮೇಶ ಮುಸ್ಟೂರು,ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.