ADVERTISEMENT

ಬೋರ್ಡ್‌ ಪರೀಕ್ಷೆ: ಬಗೆಹರಿಯದ ಗೊಂದಲ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 21:10 IST
Last Updated 28 ಮಾರ್ಚ್ 2022, 21:10 IST

ಕರ್ನಾಟಕ ಪಿ.ಯು. ಮಂಡಳಿ ಘೋಷಿಸಿದ ಅವಸರದ ಅಂತಿಮ ವೇಳಾಪಟ್ಟಿಯಂತೆ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದ ಪರೀಕ್ಷೆಗಳು ಏಪ್ರಿಲ್‌ 16ರಂದು ಪ್ರಾರಂಭವಾಗಬೇಕಿತ್ತು. ಜೆಇಇ ಪರೀಕ್ಷೆಯ ದಿನಾಂಕವನ್ನು ಎನ್‌ಟಿಎ ಘೋಷಿಸಿದಾಗ, ಆ ಪರೀಕ್ಷೆಗಳ ಆರಂಭವೂ ಏಪ್ರಿಲ್‌ 16ಕ್ಕೇ ನಿಗದಿಯಾಗಿತ್ತು. ಅದನ್ನು ಮನಗಂಡ ಪಿ.ಯು. ಮಂಡಳಿ ಎರಡೇ ದಿನದಲ್ಲಿ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿ, ತನ್ನ ಪರೀಕ್ಷೆಗಳನ್ನು ಏಪ್ರಿಲ್‌ 23ರಿಂದ ಪ್ರಾರಂಭಿಸುವುದಾಗಿ ಹೇಳಿತು. ಈಗ ಎನ್‌ಟಿಎ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿ, ತನ್ನ ಪರೀಕ್ಷೆಗಳು ಏಪ್ರಿಲ್‌ 21ರಿಂದ ಪ್ರಾರಂಭ ವಾಗಲಿವೆ ಎಂದಿದೆ! ಪಿಯು ಮಂಡಳಿಯ ವಿಜ್ಞಾನ ವಿಭಾಗದ ಪಿಸಿಎಂ ಪರೀಕ್ಷೆಗಳು ಏಪ್ರಿಲ್‌ 23, 26 ಹಾಗೂ ಮೇ 10ರಂದು ನಡೆಯಲಿದ್ದು ಉಳಿದ ವಿಷಯಗಳ ಪರೀಕ್ಷೆಗಳೂ ಅವುಗಳ ನಡುವೆಯೇ ನಡೆಯುತ್ತವೆ. ಅಂದರೆ ಒಂದೋ ಎರಡೋ ಪಿಯು ಬೋರ್ಡ್‌ ಪರೀಕ್ಷೆ ಬರೆದು ನಡುವೆ ಜೆಇಇ ಬರೆಯಬೇಕು ಅಥವಾ ಜೆಇಇ ಬರೆದು ಬೋರ್ಡ್‌ ಪರೀಕ್ಷೆ ಬರೆಯಬೇಕು. ಹೇಗೆ ಆಯ್ಕೆ ಮಾಡಿಕೊಂಡರೂ ಒಂದೆರಡು ದಿನ ಮಾತ್ರ ಒಂದು ಪರೀಕ್ಷೆಗೆ ಸಿಗುವುದು.

ಎರಡನೆಯ ಹಂತದ ಜೆಇಇ ಪರೀಕ್ಷೆಗಳು, ಪಿಯು ಪರೀಕ್ಷೆಗಳು ಮುಗಿದ ಒಂದು ವಾರಕ್ಕೆ, ಅಂದರೆ ಮೇ 24ರಂದು ಪ್ರಾರಂಭವಾಗಲಿವೆ. ಜೊತೆಗೆ, ಕಳೆದ ಜೆಇಇ ಪರೀಕ್ಷೆಗಳು ನಾಲ್ಕು ಅವಧಿಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಕೇವಲ ಎರಡೇ ಅವಧಿಯಲ್ಲಿ ನಡೆಯುತ್ತಿವೆ. ಒಟ್ಟಾರೆ, ಕರ್ನಾಟಕದ ವಿದ್ಯಾರ್ಥಿಗಳಿಗೆ ಜೆಇಇ ಪರೀಕ್ಷೆಗೆ ಸಿದ್ಧರಾಗಲು ಅಗತ್ಯ ಸಮಯವೇ ಇಲ್ಲವಾಗಿದೆ. ಈ ಬಾರಿಯೂ ನಾಲ್ಕು ಅವಧಿಯಲ್ಲಿ ಜೆಇಇ ಪರೀಕ್ಷೆಗಳನ್ನು ನಡೆಸಬಹುದಾಗಿತ್ತು ಅಥವಾ ಬೋರ್ಡ್‌ ಹಾಗೂ ಜೆಇಇ ಪರೀಕ್ಷೆಗಳ ನಡುವೆ ಅಂತರ ಇರುವಂತೆ ವೇಳಾಪಟ್ಟಿ ರೂಪಿಸಬಹುದಿತ್ತು. ಬೋರ್ಡ್‌ ಪರೀಕ್ಷೆಗಳೂ ಮುಖ್ಯವಾದ್ದರಿಂದ ಯಾವುದಕ್ಕೆ ಹೆಚ್ಚು ಪ್ರಾಮುಖ್ಯ ಕೊಡಬೇಕು ಎಂಬ ಗೊಂದಲ ವಿದ್ಯಾರ್ಥಿಗಳದ್ದು. ಪರಿಹಾರ ಸೂಚಿಸಬಹುದಾಗಿದ್ದ ಪಿ.ಯು. ಬೋರ್ಡ್‌ ಮತ್ತು ಎನ್‌ಟಿಎ ಮಾತ್ರ ತಮ್ಮ ಜಾಣಕುರುಡು ಮುಂದುವರಿಸಿರುವುದು ದುರಂತವೇ ಸರಿ!

ಡಾ. ಬಿ.ಆರ್.‌ಸತ್ಯನಾರಾಯಣ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.