ADVERTISEMENT

ವಾಚಕರ ವಾಣಿ| ಅಗ್ನಿಪಥ: ಮುಗಿಯದ ಗೊಂದಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:45 IST
Last Updated 20 ಜೂನ್ 2022, 19:45 IST

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಅಗ್ನಿಪಥ ಯೋಜನೆಯ ಬಗ್ಗೆ, ಒಬ್ಬ ಮಗನ ಜವಾಬ್ದಾರಿಯುತ ತಂದೆಯಾಗಿ ನನ್ನಲ್ಲಿ ಕೆಲವು ಗೊಂದಲಗಳು ಕಾಡುತ್ತಿವೆ. ಹದಿನೇಳೂವರೆ ವರ್ಷದ ವಯಸ್ಸಿನ ಮಿತಿ ಇದೆ. ಆ ವಯಸ್ಸಿಗೆ ಎಸ್ಎಸ್ಎಲ್‌ಸಿ ಅಥವಾ ಕೆಲವರಿಗೆ ಪಿಯುಸಿ ಕಲಿಯಲು ಸಾಧ್ಯ ಆಗಬಹುದು. ಅಷ್ಟು ಮಾತ್ರ ಕಲಿತವರನ್ನು ಅಗ್ನಿಪಥಕ್ಕೆ ಸೇರಿಸಿಕೊಂಡು, ಅವರಿಗೆ ತರಬೇತಿ ಕೊಟ್ಟು, ನಾಲ್ಕು ವರ್ಷ ಸೈನ್ಯದ ಸೇವೆ ಮಾಡಿಸಿ, ಆನಂತರ 22ನೇ ವಯಸ್ಸಿಗೆ ಯೋಜನೆ ಪ್ರಕಾರ ಸೈನ್ಯ ಬಿಟ್ಟು ಮಗ ಮನೆಗೆ ಬಂದರೆ, ಅವನ ಭವಿಷ್ಯ ಏನಾಗಬೇಕು? ಇತ್ತ ವಿದ್ಯಾಭ್ಯಾಸ ಅಪೂರ್ಣವಾಗಿರುತ್ತದೆ, ಅತ್ತ ಮುಂದಕ್ಕೆ ಕಲಿಯುವ ಮನಸ್ಸೂ ಹೋಗಿರುತ್ತದೆ, ಕೈಯಲ್ಲಿ ಉದ್ಯೋಗವೂ ಇರುವುದಿಲ್ಲ. ರಾಜ್ಯ ಸರ್ಕಾರದ ಇಲ್ಲವೇ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ಆಸೆ ತೋರಿಸಲಾಗುತ್ತಿದೆಯಷ್ಟೆ, ಆ ಹೊತ್ತಿಗೆ ಕಲಿಯಲಾದ ಶಿಕ್ಷಣಕ್ಕೆ ತಕ್ಕಂತೆ ಮಕ್ಕಳಿಗೆ ಯಾವ ಕೆಲಸದಲ್ಲಿ ಮೀಸಲಾತಿ
ಕೊಡಬಹುದು?

ಈ ಯೋಜನೆಯ ಫಲಾನುಭವಿಗಳು ಯಾರಾಗಬಹುದೆಂದು ನೋಡಿದಾಗ, ಪ್ರಭಾವಿ ಜಾತಿಯವರು ಅಗ್ನಿಪಥ ಸೇರುವುದು ಕಡಿಮೆ, ದುಡ್ಡಿರುವ ತಂದೆ ತಾಯಿ ಮಕ್ಕಳ ಓದನ್ನು ಮೊಟಕು ಮಾಡುವುದಿಲ್ಲ. ಕೂಲಿ ಕಾರ್ಮಿಕರು, ರೈತರು, ಹಣದ ಅಭಾವ ಇರುವ ಬಡವರ ಮಕ್ಕಳಿಗೆ ಈ ಯೋಜನೆ ಆಕರ್ಷಕ ಆಗಬಹುದು. ಅಂದರೆ, ಉಚಿತ ಶಿಕ್ಷಣ ಕೊಡಬೇಕಾದ ಸರ್ಕಾರ, ಆ ವಯಸ್ಸಿನ ಮಕ್ಕಳಿಗೆ ಮೊದಲು ಹಣದ ಆಸೆ ತೋರಿಸಿ, ಕೆಲಸ ಕೊಟ್ಟಂತೆ ಮಾಡಿ, ಆಮೇಲೆ ಮನೆಗೆ ಕಳುಹಿಸುವುದು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದಂತೆ ಆಗುವುದಿಲ್ಲವೇ? ಈ ಯೋಜನೆಯಿಂದ ಉಳ್ಳವರು ಮತ್ತು ಬಡವರ ನಡುವೆ ಇನ್ನಷ್ಟು ಕಂದಕ ನಿರ್ಮಾಣ ಆಗುವುದಿಲ್ಲವೇ?

- ತಾ.ಸಿ.ತಿಮ್ಮಯ್ಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.