ADVERTISEMENT

ಭಾವನೆಯಿಂದಲೂ ರೋಗ ಗ್ರಹಿಸಬೇಕು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 16:04 IST
Last Updated 11 ಡಿಸೆಂಬರ್ 2019, 16:04 IST

ರೋಗಿಗಳೊಂದಿಗೆ ಅವರ ಭಾಷೆಯಲ್ಲೇ ಮಾತನಾಡುವಲ್ಲಿ ವೈದ್ಯರು ತೋರುವ ಕಾಳಜಿಯ ಬಗ್ಗೆ ಡಾ. ಕೆ.ಎಸ್‌.ಪವಿತ್ರ ಬರೆದಿದ್ದಾರೆ (ಸಂಗತ, ಡಿ. 10). ವೈದ್ಯನಿಗೆ ಎಷ್ಟೇ ಭಾಷೆಗಳನ್ನು ಕಲಿತರೂ ಸಾಲುವುದಿಲ್ಲ. ಸರ್ಕಾರಿ ವೈದ್ಯನ ಹೊರತು ವಿವಿಧ ಭಾಷೆಗಳನ್ನು ಕಲಿಯುವ ಅವಕಾಶ ಇತರರಿಗೆ ಸಿಗುವುದು ದುರ್ಲಭ.

ನಾನು ಕನ್ನಡದಲ್ಲೇ (ಆಯುರ್ವೇದ) ಓದಿ ವೈದ್ಯನಾಗಿದ್ದರೂ, ಹೊಸ ಊರಿಗೆ ವರ್ಗವಾಗಿ ಹೋದಾಗ ನನ್ನ ಕನ್ನಡ ಭಾಷೆ ಹಳೆಯದೆನಿಸುತ್ತದೆ. ವಿಜಯಪುರದ ಒಂದು ಕುಗ್ರಾಮಕ್ಕೆ ವರ್ಗವಾಗಿ ಹೋಗಿದ್ದೆ. ಚಿಕಿತ್ಸೆ ನೀಡಿದ ಮೇಲೆ ರೋಗಿಯ ತಾಯಿ ‘ಇವನಿಗೆ ಉಣ್ಣಾಕೆ ಬಾನಾ ಕೊಡ್ಲಾ?’ ಎಂದು ಕೇಳಿದಳು. ನಾನು ‘ಬೇಡ, ಅನ್ನ ಬೇಕಾದರೆ ಕೊಡು’ ಎಂದದ್ದಕ್ಕೆ ಆ ಮಹಾತಾಯಿ ಗರಬಡಿದವಳಂತೆ ನಿಂತದ್ದೇಕೆ ಎಂಬುದು ನನಗೆ ನಂತರ ಗೊತ್ತಾಯಿತು. ಬಾನಾ ಎನ್ನುವುದು ಒಂದು ಕಜ್ಜಾಯವಲ್ಲ, ಅನ್ನಕ್ಕೇ ಈ ಜನ ಬಾನಾ ಅನ್ನುತ್ತಾರೆ ಎಂಬುದು!

ನಮ್ಮೂರಿನಲ್ಲಿ ಹವ್ಯಕ, ಕನ್ನಡ, ಕೊಂಕಣಿ, ಉರ್ದು ಭಾಷೆಗಳ ಬಳಕೆಯನ್ನು ಅರಿತಿದ್ದೆ. ಬೆಂಗಳೂರಿನಲ್ಲಿ ತೆಲುಗು, ತಮಿಳು ಅರಿತೆ. ಗಾಣಗಾಪುರವು ಮರಾಠಿಯನ್ನು ಕಲಿಸಿದರೆ, ಕಲಬುರ್ಗಿ ನನ್ನ ಉರ್ದುವನ್ನು ಅ‍ಪ್‌ಗ್ರೇಡ್‌ ಮಾಡಿತು. ರೋಗಿಗಳ ಮಾತು ಸುಲಭವಾಗಿ ಅರ್ಥವಾಗುವುದಿಲ್ಲ. ನಾವು ಅದನ್ನು ಅರ್ಥೈಸಿಕೊಳ್ಳಬೇಕು. ರೋಗಿಯೊಬ್ಬ ‘ಈವತ್ತ್ ರಾತ್ರಿಗೆ ಜ್ವರ ಬಿಟ್ಟಿತ್ತು’ ಎಂದರೆ, ರೋಗಿಗೆ ನಿನ್ನೆ ರಾತ್ರಿ ಜ್ವರ ಬಂದಿತ್ತು ಎಂದು ತಿಳಿದು ಚಿಕಿತ್ಸೆ ನೀಡಬೇಕು. ‘ಅಡಗೀ ಸರಿಯಾಗಿ ಆಗೋದಿಲ್ಲ’ ಎಂದು ಒಬ್ಬಾಕೆ ನನ್ನಲ್ಲಿ ಹೇಳಿಕೊಂಡಳು. ಅಡಗಿ ಸರಿಮಾಡೋ ಔಷಧಿ ನನ್ನಲ್ಲಿ ಹೇಗೆ ತಾನೇ ಇರಲು ಸಾಧ್ಯ? ಮುಂದುವರಿದ ಪ್ರಶ್ನಾವಳಿ, ಆಕೆಗೆ ಜೀರ್ಣಶಕ್ತಿಯ ತೊಂದರೆ ಇದೆ ಎಂದು ಅರ್ಥ ಮಾಡಿಸಿತು. ಮೈಸೂರಿನಲ್ಲಿ ಒಬ್ಬ ಹಿರಿಯರು ‘ಕಾಲಪ್ರವೃತ್ತಿ ಸರಿ ಇಲ್ಲ’ ಎಂದು ಬಂದಾಗ, ಅದು ಮಲವಿಸರ್ಜನೆಯ ತೊಂದರೆ ಎಂಬುದನ್ನು ನಂತರ ಗೊತ್ತು ಮಾಡಿಕೊಂಡೆ. ಮಿತ್ರ ವೈದ್ಯರೊಬ್ಬರು ತಮ್ಮಲ್ಲಿಗೆ ‘ಕಾಲ್ ಮಡಿಯಾಕೆ ತೊಂದರೆ’ ಎಂದು ಚಿಕಿತ್ಸೆಗೆ ಬಂದಾಗ ತಾವು ಮೊಳಕಾಲು ನೋವಿಗೆ ಚಿಕಿತ್ಸೆ ನೀಡಿದ್ದಾಗಿ ನೆನಪನ್ನು ಹಂಚಿಕೊಂಡಿದ್ದರು. ‘ಕಾಲ್ ಮಡಿಯುವುದು’ ಎಂದರೆ ಮೂತ್ರ ವಿಸರ್ಜನೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಭಾಷಾ ಗೊಂದಲದಿಂದಾಗಿ ಚಿಕಿತ್ಸೆಯಲ್ಲಿ ಎಡವಟ್ಟಾಗುವ ಸಾಧ್ಯತೆ ಇರುತ್ತದೆ. ರೋಗಿಯ ಭಾಷೆಯನ್ನು ಭಾಷೆಯಾಗಿ ಮಾತ್ರವಲ್ಲದೆ ಭಾವನೆಯಿಂದಲೂ ರೋಗವನ್ನು ಗ್ರಹಿಸಬೇಕಾಗುತ್ತದೆ.

ADVERTISEMENT

– ಡಾ. ಈಶ್ವರ ಶಾಸ್ತ್ರಿ ಟಿನಸರ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.