ADVERTISEMENT

ಬಿಜೆಪಿಯ ಭವಿಷ್ಯ ಡೊಲಾಯಮಾನ?

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 20:00 IST
Last Updated 2 ನವೆಂಬರ್ 2018, 20:00 IST
325
325   

ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗಳ ವಿದ್ಯಮಾನಗಳನ್ನು ಗಮನಿಸಿದರೆ ಬಿಜೆಪಿಯ ರಾಜ್ಯ ಘಟಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.

ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಆ ಪಕ್ಷದ ನಾಯಕರು ವಿಫಲರಾಗಿದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ಅಭ್ಯರ್ಥಿಯು ಕೊನೆಯ ಗಳಿಗೆಯಲ್ಲಿ ನಿಜಬಣ್ಣವನ್ನು ಬಯಲು ಮಾಡಿ, ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌ ತೆಕ್ಕೆಗೆ ಮರಳಿದ್ದಾರೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಸಂಗತಿಯಾಗಿ ಕಂಡರೂ ವಾಸ್ತವದಲ್ಲಿ ಇದರ ಹಿಂದೆ ಹಣಬಲ, ತೋಳ್ಬಲದ ರಾಜಕಾರಣದಲ್ಲಿ ನಿಷ್ಣಾತರಾಗಿರುವ ಧುರೀಣರ ಷಡ್ಯಂತ್ರವಿರುವುದು ಸ್ಪಷ್ಟ.

ಬಿಜೆಪಿಯ ಕೆಲವು ನಾಯಕರಿಗೆ ನಾಲ್ಕಾರು ದಶಕಗಳ ರಾಜಕಾರಣದ ಅನುಭವವಿದ್ದರೂ ಈ ಬಾರಿ ವಿರೋಧಿಗಳ ಷಡ್ಯಂತ್ರವನ್ನು ಅರಿಯುವಲ್ಲಿ ಅವರು ವಿಫಲರಾದರು. ರಾಜ್ಯದಲ್ಲಿ ಪಕ್ಷವು ಒಡೆದ ಮನೆಯಾಗಿರುವುದೂ ಇದಕ್ಕೆ ಕಾರಣ. ಪಕ್ಷದ ಎರಡನೇ ಶ್ರೇಣಿಯ ನಾಯಕರಿಗೆ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯವಾಗಿ, ಪಕ್ಷನಿಷ್ಠೆ, ಬದ್ಧತೆ, ಕರ್ತವ್ಯಪ್ರಜ್ಞೆ ಮರೆಯಾದಂತಿದೆ.

ADVERTISEMENT

‘ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎನ್ನುವಂತೆ, ರಾಜ್ಯದಲ್ಲಿ ಸದ್ಯಕ್ಕಂತೂ ವಿರೋಧ ಪಕ್ಷವಾಗಿ ಉಳಿಯುವುದು ಬಿಜೆಪಿಗೆ ಅನಿವಾರ್ಯವಾದಂತಿದೆ. ಆಗಿರುವ ತಪ್ಪುಗಳಿಂದ ಪಾಠ ಕಲಿತು ಸಂಘಟಿತರಾಗಿ ಕೆಲಸ ಮಾಡಿದರೆ ಪಕ್ಷಕ್ಕೆ ಒಳಿತಾದೀತು. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸೋಲು ಕಟ್ಟಿಟ್ಟದ್ದು.

ಜಿ. ಚನ್ನಬಸವ ಸ್ವಾಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.