ADVERTISEMENT

ಕನ್ನಡ ಪ್ರೀತಿ ಕಡಿಮೆಯಾಗುವುದಿಲ್ಲ!

ಆರ್.ಕುಮಾರ್ ಬೆಂಗಳೂರು
Published 20 ಡಿಸೆಂಬರ್ 2018, 19:42 IST
Last Updated 20 ಡಿಸೆಂಬರ್ 2018, 19:42 IST

ಕನ್ನಡ ಮಾತೃಭಾಷೆಯಾಗಿರುವ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೆ ಅವರಲ್ಲಿ ಕನ್ನಡದ ಮೇಲಿನ ಪ್ರೀತಿ– ಅಭಿಮಾನ ಕಡಿಮೆಯಾಗುತ್ತದೆ ಎಂಬ ಭಾವನೆ ಸರಿಯಲ್ಲ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಜಾರಿಗೊಳಿಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಗೋಕಾಕ್ ಮಾದರಿಯ ಹೋರಾಟ ರೂಪಿಸುವ ಎಚ್ಚರಿಕೆ ನೀಡಿರುವ ಸಾಹಿತಿಗಳು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.

ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ತಾಯಿಯ ಮಕ್ಕಳನ್ನು ಸಹ ಜಾಗತಿಕ ಮಟ್ಟದ ಸ್ಪರ್ಧೆಗೆ ಅಣಿಗೊಳಿಸುವ ಕೆಲಸ ಆಗಬೇಕಿದೆ. ಕನ್ನಡ ಮಾಧ್ಯಮದಲ್ಲಿ, ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು, ತಾಂತ್ರಿಕ ಪರಿಣತಿಯ ಜೊತೆಗೆ ಉತ್ತಮ ಅಂಕ ಗಳಿಸಿದರೂ ಇಂಗ್ಲಿಷ್‌ ಸಂವಹನ ಕೌಶಲ ಇಲ್ಲದೆ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ವಿಫಲರಾಗುತ್ತಾರೆ.

ADVERTISEMENT

ಇದರ ಫಲವಾಗಿ, ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ಶ್ರೀಮಂತರ ಮತ್ತು ಹೊರರಾಜ್ಯದಿಂದ ಬಂದವರ ಮಕ್ಕಳು ಎಲ್ಲ ಕಂಪನಿಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಮ್ಮವರನ್ನು ಪರೋಕ್ಷವಾಗಿ ತುಳಿಯುತ್ತಿದ್ದಾರೆ.

ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುವುದರಿಂದ ಮಕ್ಕಳ ನಡುವೆ ಇರುವ ಶಿಕ್ಷಣ ತಾರತಮ್ಯ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿ ಸಮಾನ ಶಿಕ್ಷಣದ ಆಶಯವು ಈಡೇರಬಹುದು. ಆದ್ದರಿಂದ ಸಾಹಿತಿಗಳು ಹೋರಾಟದ ನಿರ್ಧಾರದಿಂದ ಹಿಂದೆಸರಿದು, ಬಡವರ ಮಕ್ಕಳಿಗೆ ನ್ಯಾಯ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.