ADVERTISEMENT

ವಾಚಕರ ವಾಣಿ | ಭಾರತ್‌ ಜೋಡೊ- ಎಲ್ಲೆಡೆ ನಡೆಯಲಿ ಸಂವಾದ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 19:31 IST
Last Updated 30 ಸೆಪ್ಟೆಂಬರ್ 2022, 19:31 IST

‘ಭಾರತ್‌ ಜೋಡೊ’ ಯಾತ್ರೆ ನಮ್ಮ ಈ ದುರಿತ ಕಾಲದಲ್ಲಿ ಸ್ವಾಗತಾರ್ಹ. ಕಾಂಗ್ರೆಸ್‌ ಪಕ್ಷ ತನ್ನ ಬಲವರ್ಧನೆಗೆ ಇದನ್ನು ಬಳಸುವುದೂ ತಪ್ಪೇನಿಲ್ಲ. ಯಾಕೆಂದರೆ ಜನಸಾಮಾನ್ಯರ ಸಂಪರ್ಕ, ಸಂವಾದದ ಮೂಲಕ ಒಂದು ರಾಜಕೀಯ ಪಕ್ಷ ಗಟ್ಟಿಗೊಳ್ಳುವುದು ಮುಖ್ಯ. ಈ ಯಾತ್ರೆಯು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮಾತ್ರ ಹಾದು ಹೋಗುತ್ತಿದೆ. ಅಂದರೆ ಮುಕ್ಕಾಲುಪಾಲು ರಾಜ್ಯ ಈ ಯಾತ್ರೆಯ ಪಥದಲ್ಲಿ ಇಲ್ಲ. ಕಾಂಗ್ರೆಸ್ಸಿನ ಎಲ್ಲ ನಾಯಕರಿಗೂ ರಾಹುಲ್‌ ಅವರ ಜೊತೆ ನಡೆಯುವ ಹೆಬ್ಬಯಕೆ ಇರುವ ಕಾರಣ, ಬಹುತೇಕ ಜಿಲ್ಲೆಗಳಿಂದ ಯಾತ್ರೆಯ ಪಥಕ್ಕೆ ಇವರು ಬಂದು ಸೇರಬಹುದು. ಆದರೆ ಯಾತ್ರೆಯ ಆಶಯಗಳ ಬಗ್ಗೆ ಈ ಜಿಲ್ಲೆಗಳ ಕಾಂಗ್ರೆಸ್‌ ನಾಯಕರ ನಿಲುವೇನು? ಇವುಗಳ ಬಗ್ಗೆ ಅವರಿಗಿರುವ ಸೈದ್ಧಾಂತಿಕ ಗ್ರಹಿಕೆ ಏನು ಎಂಬುದು ಗೊತ್ತಾಗುವುದು ಮುಖ್ಯ. ರಾಹುಲ್‌ ಮತ್ತು ಇತರ ನಾಯಕರಷ್ಟೇ ನಾಗರಿಕ ಸಂಘಟನೆಗಳ ಜೊತೆ ಸಂವಾದ ಮಾಡಿದರೆ ಸಾಲದು. ಉಳಿದ ಜಿಲ್ಲೆಗಳಲ್ಲೂ ಯಾತ್ರೆಯ ಬಗ್ಗೆ ಸ್ಪಂದನೆಯ ಕಾರ್ಯಕ್ರಮವನ್ನು ಆಯಾ ಜಿಲ್ಲೆಯ ಕಾಂಗ್ರೆಸ್ಸಿಗರು ಹಮ್ಮಿಕೊಳ್ಳಬೇಕು.

ಯಾತ್ರೆ ಸಾಗದ ಜಿಲ್ಲೆಗಳಲ್ಲಿ ಎರಡು ವಾರಗಳ ಅಂತರದಲ್ಲಿ ಕನಿಷ್ಠ ಐದು ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್ಸಿಗರು ‘ಭಾರತ್‌ ಜೋಡೊ’ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಆಯಾ ಜಿಲ್ಲೆಯ ವಿವಿಧ ಪ್ರಜಾಸತ್ತಾತ್ಮಕ ಸಂಘಟನೆಗಳು ಇದರಲ್ಲಿ ಒಳಗೊಳ್ಳುವಂತೆ ಮಾಡಬೇಕು. ಈ ಸಂಘಟನೆಗಳ ನಿರೀಕ್ಷೆಗಳೇನು, ಕಾರ್ಯಸೂಚಿಯೇನು ಎಂಬುದನ್ನು ಅರಿಯಬೇಕಾಗಿದೆ. ಈ ಮೂಲಕ ಆಯಾ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಒಟ್ಟಾರೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆಯೂ ಒಂದು ಮಹಾವೇದಿಕೆಯನ್ನು ಸೃಷ್ಟಿಸಬಹುದು. ಸೃಷ್ಟಿಸಬೇಕಿದೆ. ಇದರಲ್ಲಿ ಉದಾಸೀನ ತೋರಿ, ಚುನಾವಣಾ ಹಪಹಪಿಗಷ್ಟೇ ಜಿಲ್ಲಾ ಕಾಂಗ್ರೆಸ್ಸಿಗರು ಸೀಮಿತವಾದರೆ, ರಾಹುಲ್‌ ಅವರು ಎದುರಿಸಬಯಸುತ್ತಿರುವ ವಿಭಜಕ ಶಕ್ತಿಗಳನ್ನು ಸ್ಥಳೀಯವಾಗಿ ಎದುರಿಸಿ ಸೋಲಿಸುವುದು ಸಾಧ್ಯವೇ ಇಲ್ಲ. ಸಂಘಟನೆಗಳೂ ತಮ್ಮ ತಮ್ಮ ಜಿಲ್ಲೆಗಳ ಕಾರ್ಯಕರ್ತರನ್ನು ಈ ಸಂವಾದಕ್ಕೆ ಅಣಿಗೊಳಿಸಬೇಕಿದೆ.

- ಕೆ.ಪಿ.ಸುರೇಶ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.