ADVERTISEMENT

ಹಿಂದಿ ರಾಷ್ಟ್ರಭಾಷೆ: ಪರಂಪರೆ ನಾಶ ಮಾಡುತ್ತಿರುವವರಾರು?

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 20:53 IST
Last Updated 28 ಸೆಪ್ಟೆಂಬರ್ 2022, 20:53 IST

‘ದೇಶ ಒಡೆಯುವ ರಾಜಕೀಯ ಕುತಂತ್ರ, ಷಡ್ಯಂತ್ರದ ಭಾಗವಾಗಿ ಹಿಂದಿಯನ್ನು ವಿರೋಧಿಸಲಾಗುತ್ತಿದೆ. ಹಿಂದಿ ರಾಷ್ಟ್ರಭಾಷೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವೈ.ಎ.ನಾರಾಯಣ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಸೆ. 27). ಅವರ ಈ ಮಾತುಅರ್ಥಹೀನವಾದುದು. ಭಾರತವು ಹಲವು ರಾಜ್ಯಗಳ ಒಕ್ಕೂಟ. ಸಂವಿಧಾನದಲ್ಲಿ ಇದನ್ನು ಗಣರಾಜ್ಯ ಎಂದು ಕರೆಯಲಾಗಿದೆ. ಅಂದರೆ ಭಾರತ ಎನ್ನುವುದು ಒಂದು ದೇಶವಾದರೂ ಇಲ್ಲಿರುವುದು ಒಂದೇ ಭಾಷೆ, ಒಂದೇ ಮತ, ಒಂದೇ ಸಂಸ್ಕೃತಿ, ಒಂದೇ ರೀತಿಯ ಉಡುಗೆ- ತೊಡುಗೆ, ಒಂದೇ ಆಹಾರ ಪದ್ಧತಿ ಅಲ್ಲ. ವೈವಿಧ್ಯವೇ ಇದರ ಪ್ರಧಾನ ಲಕ್ಷಣ. ಈ ವೈವಿಧ್ಯ ಇದ್ದೂ ಏಕತೆಯನ್ನು ಸಾಧಿಸಿದೆ. ಇದೇ ಇದರ ವಿಶೇಷ. ಇದನ್ನು ನಾವು ಉಳಿಸಿ, ಬೆಳೆಸಬೇಕು. ಈ ವೈವಿಧ್ಯವನ್ನು ಸವರಿಬಿಟ್ಟು ಏಕತೆಯನ್ನು ತರಲು ಪ್ರಯತ್ನಿಸುತ್ತಿರುವವರೇ ಸಾವಿರಾರು ವರ್ಷಗಳ ಈ ಅಪರೂಪದ ಪರಂಪರೆಯನ್ನು ನಾಶ ಮಾಡುತ್ತಿರುವವರು!

ಹಿಂದಿ ಕಲಿಯುವವರು ಕಲಿಯಲಿ ಎಂದು ಕನ್ನಡಿಗರು ತೋರಿದ ಔದಾರ್ಯವನ್ನು ದುರುಪಯೋಗ ಮಾಡಿಕೊಂಡು ಹಿಂದಿ ಹೇರಿಕೆಯನ್ನು ನಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿರುವ ಬ್ಯಾಂಕು, ವಿಮೆ, ರೈಲ್ವೆಯಂತಹ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ದುಸ್ತರವಾಗಿದೆ. ‘ನೀಟ್’ ವ್ಯವಸ್ಥೆಯಿಂದಾಗಿ ಕನ್ನಡ ಮಕ್ಕಳಿಗೆ ವೈದ್ಯಕೀಯದಂತಹ ವೃತ್ತಿಶಿಕ್ಷಣದಲ್ಲಿ ಅನ್ಯಾಯವಾಗುತ್ತಿದೆ. ಕರ್ನಾಟಕದಲ್ಲೇ ಕನ್ನಡದ ನಾಮಫಲಕಗಳಿಗಾಗಿ ಹೋರಾಟ ಮಾಡಬೇಕಾಗಿದೆ. ಪರಿಸ್ಥಿತಿ ಹೀಗೆಲ್ಲ ಇರುವಾಗ ನಮ್ಮನ್ನು ಕಾಯುವವರೇ ಈ ರೀತಿ ಮಾತನಾಡತೊಡಗಿದರೆ ಇನ್ನಾರಿಗೆ ದೂರುವುದು? ‘ಹರಕೊಲ್ಲಲ್ ಪರ ಕಾಯ್ವನೆ?’ ಎಂಬಂತಾಗಿದೆ ನಮ್ಮ ಪರಿಸ್ಥಿತಿ!

ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.