ADVERTISEMENT

ವಾಚಕರ ವಾಣಿ: ಎಸ್‌ಡಿಎಂಸಿ- ಮರೆಯಾಗದಿರಲಿ ನೈಜ ಆಶಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 23:30 IST
Last Updated 3 ಮಾರ್ಚ್ 2022, 23:30 IST

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ರಚನೆಯ ನೈಜ ಆಶಯವೇ ಶಾಲಾ ಅಭಿವೃದ್ಧಿಗೆ ಶ್ರಮಿಸುವುದು ಹಾಗೂ ಕಲಿಕಾ ಚಟುವಟಿಕೆಗಳ ಮೇಲುಸ್ತುವಾರಿಯೇ ಆಗಿದೆ. ಆದರೆ ಪ್ರಸ್ತುತ ಶಾಲೆಗಳಲ್ಲಿನ ಬಹುತೇಕ ಎಸ್‌ಡಿಎಂಸಿಗಳು ರಾಜಕೀಯಪ್ರೇರಿತವಾಗಿ ಇಂತಹ ನೈಜ ಆಶಯಕ್ಕೆ ಧಕ್ಕೆ ತರುತ್ತಿರುವುದು ಆತಂಕದ ಸಂಗತಿ. ಈ ಕುರಿತು ಅರವಿಂದ ಚೊಕ್ಕಾಡಿ ಅವರ ಲೇಖನ (ಪ್ರ.ವಾ., ಮಾರ್ಚ್ 2 ) ವಾಸ್ತವ ಸಂಗತಿಗಳನ್ನು ಅನಾವರಣಗೊಳಿಸಿದೆ. ಈಗಿನ ಎಸ್‌ಡಿಎಂಸಿಗಳಲ್ಲಿ ಶೇಕಡ 50ರಷ್ಟು ಸಮಿತಿಗಳು ಶಾಲಾ ಪ್ರಗತಿಗೆ ಅವಿರತ ಶ್ರಮಿಸಿ, ಅಗತ್ಯ ಬೆಂಬಲ ನೀಡುತ್ತಿದ್ದರೆ, ಇನ್ನುಳಿದವು ಮುಖ್ಯಗುರುಗಳಿಗೆ, ಶಿಕ್ಷಕರಿಗೆ ಕಿರುಕುಳ ನೀಡುತ್ತಾ ಅಧಿಕಾರದ ದರ್ಪ ಮೆರೆಯುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ. ಹಣ ದುರ್ಬಳಕೆಯಂತಹ ಗಂಭೀರ ಅಪರಾಧಕ್ಕಾಗಿ ಸಾವಿರಾರು ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಗತಿಯೂ ಇತ್ತೀಚೆಗಷ್ಟೇ ವರದಿಯಾದದ್ದನ್ನು ಗಮನಿಸಿದ್ದೇವೆ.

ಕೇವಲ ಕಾಮಗಾರಿಗಳಾಸೆಗೆ, ಹಣದಾಸೆಗೆ ಜಿದ್ದಿಗೆ ಬಿದ್ದು ಎಸ್‌ಡಿಎಂಸಿ ಅಧ್ಯಕ್ಷರಾಗುವುದು, ಪಂಚಾಯಿತಿ ಸದಸ್ಯರು, ಶಾಸಕರ ಬೆಂಬಲಿಗರೆಂದು ಬಿಂಬಿಸಿಕೊಳ್ಳುತ್ತ ಅತಿರೇಕದ ವರ್ತನೆ ತೋರುವುದು ಶಾಲಾ ಕಲಿಕಾ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗ ಕಾಮಗಾರಿಗಳ ಜವಾಬ್ದಾರಿ ಇಲ್ಲದಿರುವುದು ಮುಖ್ಯ ಗುರುಗಳನ್ನು ಕೊಂಚ ನಿರಾಳವಾಗಿಸಿದೆ ಎನ್ನಬಹುದು. ಇಲಾಖೆಯಿಂದ ಸಮಿತಿಗಳ ಸಬಲೀಕರಣಕ್ಕಾಗಿ ನೀಡಲಾಗುತ್ತಿರುವ ನಾಲ್ಕು ಹಂತಗಳ ತರಬೇತಿಯ ಗರಿಷ್ಠ ಪ್ರಯೋಜನವನ್ನು ಸದಸ್ಯರು ಪಡೆದು, ಶಾಲಾಭಿವೃದ್ಧಿ ಮಾಡುವತ್ತ ಚಿತ್ತ ಹರಿಸಬೇಕಿದೆ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವಂತೆ ಸಶಕ್ತವಾಗಬೇಕಿದೆ.

ಸುರೇಶ್ ಕಲಾಪ್ರಿಯಾ,ಗಂಗಾವತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.