ದೇಶದ ಮೊದಲ ಲೋಕಪಾಲರು ಕಡೆಗೂ ಆಯ್ಕೆಯಾಗಿರುವುದು ಸ್ವಾಗತಾರ್ಹ. ಲೋಕಪಾಲರು ಕಾರ್ಯಾರಂಭ ಮಾಡಿದ ಕೂಡಲೇ ಸರ್ಕಾರದ ಎಲ್ಲಾ ಸೇವೆಗಳಲ್ಲಿ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಒಡಮೂಡುತ್ತದೆ ಹಾಗೂ ಭ್ರಷ್ಟಾಚಾರದ ಸಮಸ್ಯೆ ನಿವಾರಣೆಯಾಗಿಬಿಡುತ್ತದೆ ಎಂದುಕೊಳ್ಳುವುದು ಅವಾಸ್ತವಿಕ. ಆದರೆ, ನಮ್ಮ ಕೆಲಸವನ್ನು ಗುರುತಿಸುವವ ಮೇಲೆ ಒಬ್ಬ ಇರುತ್ತಾನೆ, ನಮ್ಮ ಎಲ್ಲ ಕಾರ್ಯಗಳನ್ನೂ ಆತ ಗಮನಿಸುತ್ತಾ ಇರುತ್ತಾನೆ ಎನ್ನುವ ಭಯ ಸಹಜವಾಗಿಯೇ ಅಧಿಕಾರಿಗಳನ್ನು ಕಾಡುತ್ತಿರುತ್ತದೆ. ಇದರಿಂದ ಸುಲಭವಾಗಿ ಭ್ರಷ್ಟಾಚಾರಕ್ಕೆ ಒಳಗಾಗದೆ ಜಾಗೃತರಾಗಿ ಹೆಜ್ಜೆ ಇಡಲು ಸಾಧ್ಯವಾಗುತ್ತದೆ.
ಲೋಕಪಾಲ ಸಂಸ್ಥೆಯು ಭ್ರಷ್ಟಾಚಾರಿಗಳಿಗೆ ತೂಗುಕತ್ತಿ ಇದ್ದಂತೆ ಕಾರ್ಯ ನಿರ್ವಹಿಸಬೇಕು. ಆ ಮೂಲಕ, ಇನ್ನು ಮುಂದೆಯಾದರೂ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದು ಎನ್ನುವ ಭರವಸೆಯನ್ನು ಜನರಲ್ಲಿ ಮೂಡಿಸಬೇಕು. ಜನರು ಅಧಿಕಾರಿಗಳಿಗೆ ಲಂಚ ನೀಡದೆ ಅಂತಹ ವ್ಯಕ್ತಿಗಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೆಸೆಯಬೇಕು. ಲಂಚ ಕೊಡುವವನ ಕೈ ಎಲ್ಲಿಯವರೆಗೆ ಮುಂದೆ ಹೋಗುತ್ತದೋ ಅಷ್ಟರಮಟ್ಟಿಗೆ ತೆಗೆದುಕೊಳ್ಳವವನ ಕೈ ಸಹ ಮುಂದೆ ಸಾಗುತ್ತಾ ಇರುತ್ತದೆ. ಆದ್ದರಿಂದ ನಾಗರಿಕರು ಜಾಗೃತರಾಗಿ ಹೆಜ್ಜೆ ಇಟ್ಟು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು.
–ದಾಕ್ಷಿಣಿ ಆರ್.,ಮಾಸ್ತಿಕಟ್ಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.