ADVERTISEMENT

ಸೌಲಭ್ಯಕ್ಕೆ ಕತ್ತರಿ: ಸಜ್ಜನರ ಪ್ರವೇಶಕ್ಕೆ ತಡೆಯಲ್ಲವೇ?

ಸುಶಾಂತ್ ಬನಾರಿ, ಪುತ್ತೂರು
Published 5 ನವೆಂಬರ್ 2018, 20:00 IST
Last Updated 5 ನವೆಂಬರ್ 2018, 20:00 IST

ಜನಪ್ರತಿನಿಧಿಗಳ ಸೌಲಭ್ಯಗಳಿಗೆ ಕತ್ತರಿ ಹಾಕಬೇಕು ಎಂಬರ್ಥದ ಎರಡು ಪತ್ರಗಳು ‘ವಾಚಕರ ವಾಣಿ’ಯಲ್ಲಿ (ಅ. 31 ಹಾಗೂ ನ. 5) ಪ್ರಕಟವಾಗಿವೆ. ಜನಪ್ರತಿನಿಧಿಗಳಿಗೆ ನೀಡುವ ಸೌಲಭ್ಯಗಳನ್ನು ರದ್ದು ಮಾಡುವುದು ಸಲ್ಲದು ಎಂದು ಮತ್ತೊಬ್ಬ ಹೇಳಿದರೆ ಮೇಲ್ನೋಟಕ್ಕೆ ಕುಚೋದ್ಯದಂತೆ ಭಾಸವಾದೀತು. ಆದರೆ ವಾಸ್ತವದಲ್ಲಿ ಸೌಲಭ್ಯಗಳಿಂದ ವಿಮುಖರನ್ನಾಗಿಸುವುದರಿಂದ ಅಕ್ರಮಗಳನ್ನು ಸಕ್ರಮ ಮಾಡಿದಂತೆ ಆಗುತ್ತದೆಯಷ್ಟೆ!

ಸದ್ಯದ ರಾಜಕಾರಣಿಗಳನ್ನು ತೂಗುವ ತಕ್ಕಡಿಯಲ್ಲೇ ತೂಗಿ ನೋಡಿದಾಗ ಸೌಲಭ್ಯ ರದ್ದು ಮಾಡಬೇಕು ಎಂಬುದು ಮೇಲ್ಮಟ್ಟದಲ್ಲಿ ಸರಿಯೆಂದೇ ಕಾಣುತ್ತದೆ. ಹೇಗಿದ್ದರೂ ರಾಜಕಾರಣಿಗಳು ಅಕ್ರಮ ಸಂಪತ್ತು ಗಳಿಸುತ್ತಾರೆ ಎಂಬ ದೃಷ್ಟಿಕೋನದಲ್ಲಿ ನೋಡಿದರೆ ಸೌಲಭ್ಯ ಕಡಿತ ಮಾಡಬೇಕೆಂಬ ವಾದ ಸರಿ ಎನಿಸಬಹುದು. ಆದರೆ ‘ಸಮಾಜ ಸುಧಾರಣೆಗಾಗಿ, ಸಾಮುದಾಯಿಕ ಒಳಿತಿಗಾಗಿ ರಾಜಕಾರಣಕ್ಕೆ ಕಾಲಿಡುತ್ತೇನೆ’ ಎಂಬ ಮನಸ್ಥಿತಿಯವರಿಗೂ ಈ ಧೋರಣೆಯು ‘ನಿನ್ನ ಹೊಟ್ಟೆ ತುಂಬಿಸಲು ಅಕ್ರಮ ದಾರಿಯನ್ನೇ ನೋಡಿಕೋ’ ಎಂದು
ಸೂಚಿಸಿದಂತೆ ಆಗುತ್ತದೆ.

ಸಜ್ಜನಿಕೆ, ಪ್ರಾಮಾಣಿಕತೆಯುಳ್ಳ ರಾಜಕಾರಣಿಗಳು ಈಗ ನಮ್ಮೆದುರು ವಿರಳವಾಗಿರಬಹುದು. ಹಾಗೆಂದು ಶಾಸನದ ಮೂಲಕ ಸೌಲಭ್ಯರಹಿತರನ್ನಾಗಿ ಮಾಡಿದರೆ ಅದರಿಂದ ರಾಜಕೀಯ ಕ್ಷೇತ್ರಕ್ಕೆ ಸಜ್ಜನರ ಪ್ರವೇಶಕ್ಕೇ ತಡೆಯೊಡ್ಡಿದಂತೆ ಅಗುವುದಿಲ್ಲವೇ? ಸಂವಿಧಾನ ಎಂಬುದು ಈ ಹೊತ್ತಿನ ಸತ್ಯ ಮಾತ್ರ ಅಲ್ಲ, ಅದು ಸಾರ್ವಕಾಲಿಕ.

ADVERTISEMENT

ಇದಕ್ಕೆ ಬದಲಾಗಿ ದುರ್ಜನರ ರಾಜಕೀಯ ಪ್ರವೇಶಕ್ಕೆ ತಡೆಯೊಡ್ಡಲು ಬಲವಾದ ನೀತಿ ನಿಯಮಗಳು ಅನುಷ್ಠಾನಕ್ಕೆ ತರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನುಗಳೇನೇ ಇದ್ದರೂ ಸಜ್ಜನರು ಮತ ಹಾಕದ ಹೊರತು, ಮತದಾರರು ತಮ್ಮ ಒಂದೊಂದೂ ಮತದ ಮೌಲ್ಯವನ್ನು ಅರಿಯದ ಹೊರತು ವ್ಯವಸ್ಥೆ ಸುಧಾರಣೆಯಾಗದು. ನೆಗಡಿಯಾದರೆ ಅದನ್ನು ವಾಸಿ ಮಾಡಬೇಕೇ ಹೊರತು ಮೂಗಿಗೇ ಕತ್ತರಿ ಹಾಕಿದರೆ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.