ADVERTISEMENT

ಚಿನ್ನಕ್ಕಿಂತ ಹೆಚ್ಚಾಯ್ತು ಚಿನ್ನದಂಥ ಗುಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:30 IST
Last Updated 21 ಅಕ್ಟೋಬರ್ 2021, 19:30 IST

ತಮಿಳುನಾಡಿನಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ವಾರಸುದಾರರಿಗೆ ಹಿಂತಿರುಗಿಸಿದ್ದನ್ನು ತಿಳಿದು (ಪ್ರ. ವಾ., ಅ. 21) ‘ಕಾಲ ಇನ್ನೂ ಕೆಟ್ಟಿಲ್ಲ, ಒಳ್ಳೆಯ ಗುಣಗಳಿರುವವರು ಇರುವುದರಿಂದಲೇ ಇನ್ನೂ ಮಳೆ ಬೆಳೆ ಬರುತ್ತಿದೆ’ ಎಂದು ಗ್ರಾಮಾಂತರ ಪ್ರದೇಶದಲ್ಲಿ ಜನ ಮಾತನಾಡುತ್ತಿದ್ದುದು ನೆನಪಾಯಿತು.

ಎಲ್ಲ ಕಾಲಕ್ಕೂ ಎಲ್ಲ ಬಗೆಯ ಗುಣಗಳು ಇರುವವರೂ ಇದ್ದೇ ಇರುತ್ತಾರೆ ಎಂಬ ಮಾತು ಸಹ ಕೇಳಿಬರುತ್ತಿರುತ್ತದೆ. ಅಷ್ಟೇ ಅಲ್ಲ ಬಂಗಾರವನ್ನು ಕಸಕ್ಕೆ ಬಿಸಾಡುವವರೂ ಇರುತ್ತಾರೆ ಮತ್ತು ತನ್ನದಲ್ಲದ ವಸ್ತುವಿಗೆ ಆಸೆಪಡದ ಜನರೂ ನಮ್ಮ ಸಮಾಜದಲ್ಲಿದ್ದಾರೆ ಎಂಬುದಕ್ಕೆ ತಮಿಳುನಾಡಿನ ಮಹಿಳೆಯೇ ನಿದರ್ಶನ.

ನಗರ, ಪಟ್ಟಣಗಳ ಜನರು ಮಾಡಿದ ಹೊಲಸನ್ನು ತಮ್ಮ ಕೈಗಳಿಂದ ವಿಲೇವಾರಿ ಮಾಡಿ ನೈರ್ಮಲ್ಯಕ್ಕೆ ಕೊಡುಗೆ ನೀಡುವ ಪೌರಕಾರ್ಮಿಕರಿಗೆ ನಮ್ಮ ಸಮಾಜ ಎಷ್ಟರಮಟ್ಟಿಗೆ ಬೆಲೆ ಕೊಡುತ್ತದೆ ಎಂಬುದು ಬೇರೆ ಮಾತು. ಇಲ್ಲಿ ಚಿನ್ನಕ್ಕೆ ಇರುವ ಬೆಲೆಗಿಂತ ಮಹಿಳೆಯ ಪ್ರಾಮಾಣಿಕತೆಯ ತೂಕವೇ ಹೆಚ್ಚಾಗಿದೆ. ಬೇಡುವವ ಬಡವ, ಸಾಕೆಂದವನೇ ಶ್ರೀಮಂತ ಎನ್ನುವ ಶರಣರ ವಚನದಂತೆ ನಿಜಕ್ಕೂ ಆ ಮಹಿಳೆಯೇ ಅಪ್ಪಟ ಚಿನ್ನ ಎನ್ನಲು ಅಡ್ಡಿ ಇಲ್ಲ ಅಲ್ಲವೆ.

ADVERTISEMENT

ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.