ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:45 IST
Last Updated 3 ಜುಲೈ 2025, 23:45 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಎಚ್‌. ನರಸಿಂಹಯ್ಯ ನೆನಪಾಗಲಿಲ್ಲವೇ?

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ್ ಸಿಂಗ್ ಅವರ ಹೆಸರಿಡಲು ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ (ಪ್ರ.ವಾ., ಜುಲೈ 3). ಈ ವಿಶ್ವವಿದ್ಯಾಲಯಕ್ಕೂ ಮನಮೋಹನ್‌ ಸಿಂಗ್‌ ಅವರಿಗೂ ಎತ್ತಣಿಂದೆತ್ತ ಸಂಬಂಧ? ವಿಚಾರವಾದಿ ಎಚ್. ನರಸಿಂಹಯ್ಯ ಅವರ ದೂರದೃಷ್ಟಿಯ ಫಲವಾಗಿ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯವು ಬಹು ವಿಸ್ತಾರವಾಗಿ ಬೆಳೆದು ನಿಂತಿದೆ.ಅಂದು ಬೆಂಗಳೂರಿನ ಹೃದಯ ಭಾಗದಲ್ಲಿದ್ದ ವಿಶ್ವವಿದ್ಯಾಲಯವನ್ನುಹೊರವಲಯಕ್ಕೆ ಸ್ಥಳಾಂತರಿಸದಿದ್ದರೆ ಈ ಮಟ್ಟಿಗೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ವಿಶ್ವವಿದ್ಯಾಲಯಕ್ಕೆ ನರಸಿಂಹಯ್ಯ ಅವರ ಹೆಸರಿಟ್ಟರೆಚೆನ್ನಾಗಿರುತ್ತದೆ. ವಿಶ್ವವಿದ್ಯಾಲಯದ  ಬೆಳವಣಿಗೆಯಲ್ಲಿ ಅವರಿಗಿದ್ದ ದೂರದೃಷ್ಟಿಯು ಸರ್ಕಾರಕ್ಕೆ ಅರ್ಥವಾಗದಿರುವುದು ಅಚ್ಚರಿ ತಂದಿದೆ. 

ADVERTISEMENT

⇒ಅ.ನಾ. ರಾವ್ ಜಾದವ್, ಬೆಂಗಳೂರು

ವನ್ಯಜೀವಿಗಳ ಹತ್ಯೆ ತಡೆಯಿರಿ

ಚಾಮರಾಜನಗರ ಜಿಲ್ಲೆಯ ಬಂಡೀಪುರದ ಬಫರ್‌ ವಲಯದಲ್ಲಿ 18 ಕೋತಿಗಳು ವಿಷಪ್ರಾಶನದಿಂದ ಮೃತಪಟ್ಟಿವೆ (ಪ್ರ.ವಾ., ಜುಲೈ 3). ಮಲೆಮಹದೇಶ್ವರ
ವನ್ಯಜೀವಿಧಾಮದಲ್ಲಿ ವಿಷಪ್ರಾಶನದಿಂದ ಐದು ಹುಲಿಗಳು ಮೃತಪಟ್ಟ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೋತಿಗಳು ಬಲಿಯಾಗಿರುವುದು ಅತ್ಯಂತ ದುಃಖಕರ.ಮನುಷ್ಯನ ದುರಾಸೆಗೆ ವನ್ಯಜೀವಿಗಳು ಜೀವ ಕಳೆದುಕೊಳ್ಳುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದ ಅಂಚಿನ ಗ್ರಾಮಗಳಲ್ಲೂ ಗಸ್ತು ಹೆಚ್ಚಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

⇒ವಿಜಯಕುಮಾರ್ ಎಚ್.ಕೆ., ರಾಯಚೂರು

ಹಿಂದಿ ಎಂಬ ಗಟ್ಟಿ ಭಾಷೆ ಇದೆಯೇ?

ಲೇಖಕ ಪುರುಷೋತ್ತಮ ಬಿಳಿಮಲೆ ಅವರ ‘ಇದು ದ್ವಿಭಾಷಾ ಸೂತ್ರದ ಸಮಯ’ ಲೇಖನವು (ಪ್ರ.ವಾ., ಜುಲೈ 3) ಹಿಂದಿ ಎಂಬುದರ ಬೇರಿಲ್ಲದ ಜಾಳುತನವನ್ನು ಸ್ಪಷ್ಟವಾಗಿ ವಿಷದೀಕರಿಸುತ್ತದೆ. ‘ಖಡಿಬೋಲಿ’ ಎಂಬುದು ಅಂದಂದಿನ, ಅಲ್ಲಲ್ಲಿನ ಆಡುಭಾಷೆ ಆಗಿತ್ತು. ಅದಕ್ಕೆ ತೇಪೆ ಹಾಕಿ ‘ಹಿಂದಿ’ ಎಂಬ ತಾತ್ಪೂರ್ತಿಕ ಸಂಕವನ್ನು ರಚಿಸಲಾಗಿತ್ತು. ಗಾಂಧೀಜಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಣಗಳನ್ನು ಕೇಳಿದಾಗ ಈ ‘ಅಸ್ಪಷ್ಟತೆ’ ಅರ್ಥವಾಗುತ್ತದೆ.ರಾಜಕೀಯ ಧುರೀಣರು, ಉತ್ತರ ಪ್ರದೇಶ, ಬಿಹಾರದಿಂದ ವಲಸೆ ಬಂದ ಕಸುಬುದಾರರು ಹಿಂದಿ ಎಂಬ ಭಾಷೆಯನ್ನು ಮಾತನಾಡುತ್ತಾರಾದರೂ, ಅದು ನಮಗೆ ಅರ್ಥವಾಗುವುದು ಭಾಷೆಗಿಂತಲೂ ಹೆಚ್ಚಾಗಿ ಸಂದರ್ಭ ಮತ್ತು ತಕ್ಕ ಹಾವಭಾವದಿಂದಷ್ಟೇ. ಆ ‘ಹಿಂದಿ’ ಕಸುಬುದಾರಿಕೆಗೆ ಸೀಮಿತವಾಗಿರಲಿ. ನಮ್ಮ ದೈನಂದಿನ ವ್ಯವಹಾರಕ್ಕೆ ಕನ್ನಡ ಬೇಕು; ವ್ಯವಹಾರಕ್ಕೆ ಇಂಗ್ಲಿಷ್.

⇒ಆರ್.ಕೆ. ದಿವಾಕರ, ಬೆಂಗಳೂರು

ಜೀವಜಾಲದ ಅರಿವು ಇರಲಿ

ಚಿಕ್ಕಬಳ್ಳಾಪುರ ಜಿಲ್ಲೆಯ ಈಗಿನ ಸ್ಥಿತಿಗತಿ ಕುರಿತ ಅ.ನ. ಯಲ್ಲಪ್ಪ ರೆಡ್ಡಿ ಅವರ ಲೇಖನ ಓದಿದಾಗ (ಪ್ರ.ವಾ., ಜುಲೈ 3) ಸುಮಾರು 40 ವರ್ಷಗಳ ಹಿಂದೆ ಬಾಗೇಪಲ್ಲಿಯ ಜೂಲಪಾಳ್ಯ ಎಂಬ ಗ್ರಾಮದಲ್ಲಿ ನಾನು ನೆಲಸಿದ್ದ ದಿನಗಳು ನೆನಪಾದವು. ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿರುವುದರಿಂದ ಈಗ ಬಾಗೇಪಲ್ಲಿ ಪಟ್ಟಣ ಸುಧಾರಿಸಿರಬಹುದು. ಆದರೆ, ಭಾಗ್ಯನಗರ ಎನ್ನುವಂತಿಲ್ಲ. ಸೇತುವೆ, ರಸ್ತೆ, ಕಟ್ಟಡ ನಿರ್ಮಾಣವಾದರೆ ಅಭಿವೃದ್ಧಿಯಾದಂತೆ ಎಂಬ ಮನಃಸ್ಥಿತಿ ಬದಲಾಗಬೇಕಾಗಿದೆ. ನಂದಿಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಅಲ್ಲಿನ ಜೀವಜಾಲದ ಬಗ್ಗೆಯೂ ಅರಿವು ಇರಬೇಕಿದೆ.

⇒ಎಚ್.ಎಸ್. ಮಂಜುನಾಥ, ಗೌರಿಬಿದನೂರು

ವ್ಯಾಪಾರಸ್ಥರ ಗೋಳು ಕೇಳೋರ‍್ಯಾರು?

ಮಂಡ್ಯ ನಗರದ ವ್ಯಾಪಾರಸ್ಥರ ಸ್ಥಿತಿ ಶೋಚನೀಯವಾಗಿದೆ. ನಗರದ ಹೃದಯ ಭಾಗ ಎನಿಸಿದ ಜೈನರ ಬೀದಿ ಹಾಗೂ ಪೇಟೆ ಬೀದಿಯು ಸದಾ ಜನರಿಂದ ತುಂಬಿ ಒಳ್ಳೆಯ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ, ಜಿಲ್ಲೆಯ ರೈತರ ಜೀವನಾಡಿಯಾದ ಮೈಸೂರು ಸಕ್ಕರೆ ಕಾರ್ಖಾನೆಯು ಯಾರೋ ಮಾಡಿದ ತಪ್ಪಿಗೆ ತನ್ನ ಹಳೆಯ ವೈಭವವನ್ನೇ ಕಳೆದುಕೊಂಡು ಕುಂಟುತ್ತಾ ಸಾಗುತ್ತಿದೆ. ಮತ್ತೊಂದೆಡೆ ನಗರದ ರೈಲ್ವೆ ಹಳಿಯ ಪಕ್ಕದಲ್ಲೇ ಇದ್ದ ತರಕಾರಿ ಮಾರುಕಟ್ಟೆಯನ್ನು ಹೊಸದಾಗಿ ಕಟ್ಟಡ ಕಟ್ಟಿ ಕೊಡುತ್ತೇವೆ ಎಂದು ಬೇರೆಡೆ ಸ್ಥಳಾಂತರ ಮಾಡಿದರು.ಹೊಸ ಕಟ್ಟಡ ಕಟ್ಟಿ ವರ್ಷಗಳೇ ಕಳೆದರೂ ಮರು ಸ್ಥಳಾಂತರ ಮಾಡಿಲ್ಲ. ದೈತ್ಯ ವ್ಯಾಪಾರಿ ತಿಮಿಂಗಿಲಗಳ ನಡುವೆಯೇ ಬದುಕು ಕಟ್ಟಿಕೊಂಡಿದ್ದ ಸಣ್ಣ ವ್ಯಾಪಾರಸ್ಥರ ಗೋಳು ಕೇಳುವವರು ಯಾರು?

⇒ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.