
ಅಕ್ರಮಕ್ಕೆ ಎಚ್ಚರಿಕೆಯೋ, ಅಥವಾ...?
2018ರಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ ಎಸಗಿರುವುದಾಗಿ ಚುನಾಯಿತ ಅಭ್ಯರ್ಥಿಯೊಬ್ಬರ ವಿರುದ್ಧ ಸೋತ ಅಭ್ಯರ್ಥಿ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ, ಅದರ ವಿಚಾರಣೆ ನಡೆದು ಈಗ ಅಕ್ರಮ ಸಾಬೀತಾಗಿದೆ. ನ್ಯಾಯಾಲಯವು ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ಆದೇಶ ನೀಡಿದೆ. ಆದರೆ ಅಕ್ರಮ ಎಸಗಿ ಈಗ
ಅನರ್ಹಗೊಂಡರೇನಂತೆ? ಶಾಸಕ ಸ್ಥಾನದ ಫಲಾನುಭವಿಯಾಗಿ ಅವಧಿ ಪೂರೈಸಿದ್ದಾಗಿದೆ!
ಇದು, ಅಕ್ರಮ ಎಸಗುವವರಿಗೆ ಒಂದು ಎಚ್ಚರಿಕೆ ಆಗುತ್ತದೋ ಅಥವಾ ಅಕ್ರಮ ಎಸಗಿದರೂ ಚುನಾಯಿತರಾದರೆ ಅವಧಿಪೂರ್ಣ ಶಾಸಕರಾಗಿರಬಹುದು ಎಂದು ಅಕ್ರಮಕ್ಕೆ ಮುಂದಾಗುವ ಭಂಡ ಧೈರ್ಯ ತುಂಬುವುದೋ ಕಾದು ನೋಡಬೇಕು!
ಸತ್ಯಬೋಧ, ಬೆಂಗಳೂರು
ರಣಹದ್ದುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗದಿರಲಿ
ರಾಮನಗರದ ರಾಮದೇವರ ಬೆಟ್ಟದಲ್ಲಿ, ಅಯೋಧ್ಯೆ ಮಾದರಿಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಈ ಬೆಟ್ಟವು ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ಆವಾಸಸ್ಥಾನವಾಗಿದೆ. ಕೇಂದ್ರ ಸರ್ಕಾರವು ಈ ಬೆಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಅಲ್ಲದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವುದರಿಂದ ವನ್ಯಜೀವಿಗಳಿಗೆ ಆಶ್ರಯತಾಣವಾಗಿದೆ.
ಇಲ್ಲಿ ಮಂದಿರ ನಿರ್ಮಾಣ ಮಾಡಿದರೆ, ಇರುವ ಬೆರಳೆಣಿಕೆಯಷ್ಟು ಹದ್ದುಗಳು ಕೂಡ ವಲಸೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವನ್ಯಜೀವಿಗಳ ಸಂರಕ್ಷಣೆಯ ಕಡೆ ಹೆಚ್ಚು ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯ. ಇದು ಅಗತ್ಯ ಕೂಡ ಹೌದು.
ಮಲ್ಲಿಕಾರ್ಜುನ, ಕಲಬುರಗಿ
ರೋಗಿಗೆ ಸ್ವಾತಂತ್ರ್ಯ ನೀಡಿದರೆ...
ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವು ಔಷಧಗಳ ಬೆಲೆಯನ್ನು ಏರಿಸಿರುವುದಕ್ಕೆ ತಾ.ಸಿ.ತಿಮ್ಮಯ್ಯ ಅವರ ಆಕ್ಷೇಪ, ಆಕ್ರೋಶ, ಹತಾಶೆ (ವಾ.ವಾ., ಏ. 1) ಅರ್ಥವಾಗುವಂತಹುದೆ. ಜನಸಾಮಾನ್ಯರ ಇಂತಹ ಅಸಹಾಯಕ ಪರಿಸ್ಥಿತಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸದಾ ಕುರುಡು ಮತ್ತು ಕಿವುಡು. ಬೆಲೆ ಏರಿಕೆಯ ಬಿಸಿ ನಮ್ಮಂತೆ ಅವರಿಗೂ ತಾಕುವಂತಿದ್ದರೆ, ಇಂತಹ ಕೆಟ್ಟ ಪರಿಸ್ಥಿತಿ ಖಂಡಿತ ಉದ್ಭವಿಸುತ್ತಿರಲಿಲ್ಲ. ಆದರೆ ತಿಮ್ಮಯ್ಯನವರು, ವೈದ್ಯರ ಮುಂದೆ ಕುಳಿತುಕೊಳ್ಳುವ ರೋಗಿಗಳಿಗೆ ಯಾವ ಸ್ವಾತಂತ್ರ್ಯ ಇದೆ ಎಂದು ಪ್ರಶ್ನಿಸಿದ್ದಾರೆ. ಇವರು ರೋಗಿಗಳಿಗೆ ಯಾವ ರೀತಿಯ ಸ್ವಾತಂತ್ರ್ಯ ಬಯಸುತ್ತಿದ್ದಾರೆ? ತಪಾಸಣೆ ಮತ್ತು ರೋಗಸ್ವರೂಪವನ್ನು ಅರಿಯಲು ಮಾಡಬೇಕಾದ ಪರೀಕ್ಷೆಗಳ ವಿಚಾರದಲ್ಲಿ ಅವರಿಗೆ ಸ್ವಾತಂತ್ರ್ಯ ಬೇಕು ಎಂದು ಬಯಸುತ್ತಿದ್ದಾರೋ ಅಥವಾ ಏನೂ ಮಾಡದೆ ಸುಮ್ಮನೆ ಔಷಧ ನೀಡಬೇಕಂತಲೋ ಸ್ಪಷ್ಟಪಡಿಸಿದ್ದರೆ ಚೆನ್ನಿತ್ತು. ಹಾಗಿದ್ದರೆ ವಕೀಲರ ಮುಂದೆ ಕೂರುವ ಕಕ್ಷಿದಾರನಿಗೆ, ನ್ಯಾಯಾಧೀಶರ ಮುಂದೆ, ಪೊಲೀಸರ ಮುಂದೆ ನಿಂತ ಆರೋಪಿಗೆ ಯಾವ ಸ್ವಾತಂತ್ರ್ಯ ಇದೆ? ಇದ್ದರೂ ಎಷ್ಟರಮಟ್ಟಿಗೆ ಅದನ್ನು ಚಲಾಯಿಸಬಹುದಾಗಿದೆ?
ರೋಗಿಗೆ ತಾನೇ ಔಷಧ ತೆಗೆದುಕೊಳ್ಳುವ, ಪರೀಕ್ಷೆ ಮಾಡಿಸಿಕೊಳ್ಳುವ, ಎಲ್ಲ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡಿದಲ್ಲಿ ಆಗುವ ಅನಾಹುತದ ಅರಿವು ತಿಮ್ಮಯ್ಯ ಅವರಿಗೆ ಇದೆಯೇ? ಅದಕ್ಕೆ ಯಾರು ಹೊಣೆ? ಈಗಾಗಲೇ
ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ, ರೋಗಿಗಳ ಎಲ್ಲ ಸಂಕಷ್ಟಗಳಿಗೆ ವೈದ್ಯರನ್ನೇ ಹೊಣೆ ಮಾಡಲಾಗುತ್ತಿದೆ. ಅದರ ಫಲವಾಗಿ ಬಡಪಾಯಿ ವೈದ್ಯರು ಹಲ್ಲೆ, ದಾಳಿ, ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಕೋರ್ಟು, ದಂಡದಂತಹವು
ಗಳನ್ನು ಅನುಭವಿಸಬೇಕಾಗಿ ಬಂದಿದೆ. ಇನ್ನಾದರೂ ವೈದ್ಯರು ಹಾಗೂ ವೈದ್ಯವೃತ್ತಿಯನ್ನು ಅನವಶ್ಯಕವಾಗಿ ಹಳಿಯುವುದು, ಕೀಳಾಗಿ ಕಾಣುವುದು, ಪೂರ್ವಗ್ರಹಪೀಡಿತರಾಗಿ ನೋಡುವುದನ್ನು ಬಿಡಬೇಕು.
ಡಾ. ಎಸ್.ಕೆ.ನಿತ್ಯಾನಂದ, ಬೆಂಗಳೂರು
ಅನಾಹುತಕಾರಿ...
ಸತೀಶ್ ಜಿ.ಕೆ. ತೀರ್ಥಹಳ್ಳಿ ಅವರ ‘ಮೌಲ್ಯ ಪ್ರಜ್ಞೆ...’ (ಪ್ರ.ವಾ., ಮಾರ್ಚ್ 18) ಲೇಖನ ಸಮಯೋಚಿತವಾಗಿದೆ. ಬಹುಪಾಲು ಜನ ಈಗಲೂ ನ್ಯಾಯಯುತ ದುಡಿಮೆಯಿಂದ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಕಳ್ಳತನ, ಮೋಸ, ವಂಚನೆ ಮಾಡುವವರನ್ನು, ಪರಿಸರ ಹಾಳು ಮಾಡುವವರನ್ನು ಸ್ಥಳೀಯವಾಗಿಯೇ ಶಿಕ್ಷಿಸಿ ಅವರನ್ನು ಸರಿದಾರಿಗೆ ತರುವ
ಪ್ರಯತ್ನವನ್ನು ಹಿಂದಿನವರು ಮಾಡುತ್ತಿದ್ದರು. ಈಗ ಅದಕ್ಕೆ ತದ್ವಿರುದ್ಧ ನಡೆ ಕಾಣಸಿಗುತ್ತದೆ. ಭ್ರಷ್ಟರನ್ನು, ಜೈಲಿಗೆ ಹೋಗಿ ಬಂದವರನ್ನು, ಜಾಮೀನಿನ ಮೇಲೆ ಬಿಡುಗಡೆಯಾದವರನ್ನು, ಶಾಂತಿ ಕದಡುವವರನ್ನು ಸನ್ಮಾನ ಮಾಡುವಂತಹ ಸ್ಥಿತಿ ತಲೆದೋರಿದೆ. ಇದು ಅನಾಹುತಕಾರಿ.
ಡಾ. ಎಸ್.ಡಿ. ರಂಗಸ್ವಾಮಿ, ಹಾಸನ
ಅಗತ್ಯ ಔಷಧಗಳ ದರ ಏರಿಕೆ ಕಳವಳಕಾರಿ
ಅಗತ್ಯ ಔಷಧಗಳ ಬೆಲೆ ಹೆಚ್ಚಳ ನಿಜಕ್ಕೂ ಆಘಾತಕಾರಿ. ಈ ಬಾರಿ ಔಷಧಗಳ ಬೆಲೆ ದಾಖಲೆ ಪ್ರಮಾಣದಲ್ಲಿ (ಶೇ 12ಕ್ಕಿಂತ ಅಧಿಕ) ಹೆಚ್ಚಳವನ್ನು ಕಂಡಿರುವುದು ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ. ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವಾಗಿ ಈ ಹಿಂದೆ ಅಗತ್ಯ ಔಷಧಗಳ ದರದ ಗರಿಷ್ಠ ಏರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿತ್ತು. ಆದರೀಗ, ಹಣದುಬ್ಬರ ತಕ್ಕಮಟ್ಟಿಗೆ
ಹತೋಟಿಯಲ್ಲಿದ್ದರೂ ಔಷಧದ ಬೆಲೆಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡಲು ಏಕೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಪ್ರಮುಖ ಔಷಧಗಳ ಪೈಕಿ ಕೆಲವನ್ನು ಕೋವಿಡ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲೇ ಇವುಗಳ ಬೆಲೆ ಏರಿಕೆ
ಯಾಗುತ್ತಿರುವುದು ಕಳವಳ ಹೆಚ್ಚಿಸಿದೆ.
ಬೇ.ನ.ಶ್ರೀನಿವಾಸಮೂರ್ತಿ, ತುಮಕೂರು
---
ಚುನಾವಣಾ ನೀತಿಸಂಹಿತೆ ಎಂಬ ‘ಶ್ರಾದ್ಧ ನಿಯಮ’?!
ಈಗ ಚುನಾವಣಾ ನೀತಿ ಸಂಹಿತೆಯ ಕಾಲ. ಈ ನೀತಿ ಸಂಹಿತೆ ಎನ್ನುವುದು ‘ಶ್ರಾದ್ಧ ನಿಯಮ’ದಂತಾಗಿದೆ. //ಶಾಸ್ತ್ರಿಗಳೋ ಭಟ್ಟರೋ//// ಹೇಳಿದಂತೆ ದೊನ್ನೆ ದಬ್ಬಾಕಿ ಎತ್ತಿಡುವುದು, ಎರಡೆರಡು, ಮೂರು ಮೂರು ದರ್ಭೆ ತುಂಡುಗಳನ್ನು ಇರಿಸುವುದು, ಜನಿವಾರದಲ್ಲಿ ಎಡ-ಬಲ ಕೈ ತೂರಿಸುವುದು, ತೆಗೆಯುವುದು... ಇವೆಲ್ಲಾ ಏಕೆಂದು ಬಹುತೇಕ ಪುರೋಹಿತರಿಗೂ ಗೊತ್ತಿರುವುದಿಲ್ಲ, ಮಾಡುವ ಕರ್ತೃವಿಗಂತೂ ಕುತೂಹಲವೂ ಇರುವುದಿಲ್ಲ...! ಅಂತೂ ಸತ್ತ ಅಪ್ಪ-ಅಮ್ಮನಿಗೆ ಪಿಂಡ ಕಾಣಿಸಬೇಕಾದ ಕರ್ತವ್ಯ ಕರ್ಮ. ಚುನಾವಣಾ ನೀತಿ ಸಂಹಿತೆ ಎನ್ನುವುದೂ ಇದಕ್ಕಿಂತ ಮಿಗಿಲೇನೂ ಅಲ್ಲ!
ಅದರ ಹೆಸರಿನಲ್ಲಿ ಹಾರಾಡಿ, ಒದರಾಡುವವರೇ ಅಸಲಿಗೆ ನೀತಿಗೆಟ್ಟವರು. ಇದು ಮಹಾಜನತೆಗೆ ಗೊತ್ತಿರುವ ವಿಷಯವೇ ಆಗಿದೆ ಎನ್ನುವುದನ್ನು ಮತದಾನ ಪ್ರಕ್ರಿಯೆಯ ಅಧಿಕಾರಿಗಳಿಗಾದರೂ ಮನವರಿಕೆ ಮಾಡಿಕೊಡಬೇಕು. ಅರ್ಹರೆಲ್ಲಾ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಿ, ತಪ್ಪದೇ ಮತದಾನ ಮಾಡಿ. ನಮ್ಮಲ್ಲೂ ಒಂದಲ್ಲೊಂದು ದಿನ, ನಿಜವಾದ ಪ್ರಜಾಪ್ರಭುತ್ವ ಜಾರಿಗೆ ಬಂದರೂ ಬರಬಹುದೆಂಬ ನಿರೀಕ್ಷೆಯಾದರೂ ನಮ್ಮಲ್ಲಿರಲಿ!
ಆರ್.ಕೆ.ದಿವಾಕರ, ಬೆಂಗಳೂರು
ಅಗತ್ಯ ಔಷಧಗಳ ದರ ಏರಿಕೆ ಕಳವಳಕಾರಿ
ಅಗತ್ಯ ಔಷಧಗಳ ಬೆಲೆ ಹೆಚ್ಚಳವಾಗಿರುವುದು ಈಗಾಗಲೇ ಅಗತ್ಯವಸ್ತುಗಳ ಬೆಲೆಯೇರಿಕೆಯಿಂದ ಬಳಲುತ್ತಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಾರಿ ಔಷಧಗಳ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಅಂದರೆ, ಶೇ 12ಕ್ಕಿಂತಲೂ ಹೆಚ್ಚಳವನ್ನು ಕಂಡಿರುವುದು ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಭಾರತದಲ್ಲಿ ಔಷಧಗಳ ಬೆಲೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವೇ (ಎನ್‍ಪಿಪಿಎ) ಈ ಏರಿಕೆಗೆ ಸಮ್ಮತಿಯ ಮೊಹರನ್ನು ಒತ್ತಿದೆ. ಕೇಂದ್ರ ಸರ್ಕಾರ ಸೂಚಿಸಿದಂತೆ, ಸಗಟು ಬೆಲೆ ಸೂಚ್ಯಂಕದ ವಾರ್ಷಿಕ ಬದಲಾವಣೆಗೆ ಅನುಗುಣವಾಗಿಯೇ ನೋವು ನಿವಾರಕಗಳು, ಸೋಂಕು ನಿವಾರಕಗಳು, ಹೃದಯಕ್ಕೆ ಸಂಬಂಧಿಸಿದ ಔಷಧಗಳು, ಆ್ಯಂಟಿಬಯಾಟಿಕ್‌ಗಳು ಸೇರಿದಂತೆ ಅಗತ್ಯ ಔಷಧಗಳ ಬೆಲೆಗಳು ಏರಿಕೆಯಾಗಿವೆ.
ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವಾಗಿ ಈ ಹಿಂದೆ ಅಗತ್ಯ ಔಷಧಗಳ ದರದ ಗರಿಷ್ಠ ಏರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿತ್ತು. ಆದರೀಗ, ಹಣದುಬ್ಬರ ತಕ್ಕಮಟ್ಟಿಗೆ ಹತೋಟಿಯಲ್ಲಿದ್ದರೂ ಔಷಧದ ಬೆಲೆಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡಲು ಏಕೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಪ್ರಮುಖ ಔಷಧಗಳ ಪೈಕಿ ಕೆಲವನ್ನು ಕೋವಿಡ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲೇ ಇವುಗಳ ಬೆಲೆ ಏರಿಕೆಯಾಗುತ್ತಿರುವುದು ಕಳವಳ ಹೆಚ್ಚಿಸಿದೆ.
ಬೇ.ನ.ಶ್ರೀನಿವಾಸಮೂರ್ತಿ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.