ADVERTISEMENT

ವಾಚಕರ ವಾಣಿ: ಸೋಮವಾರ, 23 ಜೂನ್ 2025

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 0:20 IST
Last Updated 23 ಜೂನ್ 2025, 0:20 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಶಿಕ್ಷಕರ ನೇಮಕಾತಿಗೆ ವಿಳಂಬ ಸಲ್ಲ

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದರೂ ನೇಮಕಾತಿ ಪ್ರಕ್ರಿಯೆ ಶುರುವಾಗಿಲ್ಲ. ಇದು ಬಡಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ತಳೆದಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪೂರ್ಣಾವಧಿ ಶಿಕ್ಷಕರಿಗೆ ನೀಡುವ ಸಂಬಳದಲ್ಲಿ ಐವರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ ಎಂಬುದು ಸರ್ಕಾರದ ಧೋರಣೆಯಾಗಿರಬಹುದು.

ADVERTISEMENT

ರಾಜ್ಯದಲ್ಲಿ ಡಿ.ಇಡಿ ಮತ್ತು ಬಿ.ಇಡಿ ಓದಿರುವ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪರಿಪಾಟ ಮುಂದುವರಿದರೆ, ಸರ್ಕಾರಿ ಶಾಲೆಗಳು ಉಳಿಯುವುದೇ ಕಷ್ಟಕರ. ಶಿಕ್ಷಕರ ನೇಮಕಕ್ಕೆ ಗಮನ ಹರಿಸಬೇಕಿದೆ.

– ಲಕ್ಷ್ಮೀಕಾಂತ ತುಕ್ಕನ್ನವರ, ಬೆಳಗಾವಿ

ಕುಸ್ತಿಪಟುಗಳಿಗೆ ಭತ್ಯೆ ಬೇಡವೇ?

ರಾಷ್ಟ್ರೀಯ ಶಿಬಿರದಲ್ಲಿರುವ ಹಾಕಿ ಆಟಗಾರರು ಮತ್ತು ಆಟಗಾರ್ತಿಯರಿಗೆ ತಿಂಗಳ ಭತ್ಯೆ ನೀಡಲು ಮುಂದಾಗಿರುವ ಕೇಂದ್ರ ಕ್ರೀಡಾ ಸಚಿವಾಲಯದ ನಿರ್ಧಾರವು ಸ್ವಾಗತಾರ್ಹ (ಪ್ರ.ವಾ., ಜೂನ್‌ 21). ಈ ಸೌಲಭ್ಯವನ್ನು ಕುಸ್ತಿ ಸೇರಿ ಇತರ ಕ್ರೀಡೆಗಳಿಗೂ ವಿಸ್ತರಿಸಬೇಕಿದೆ.

ಕುಸ್ತಿಯು ಶಕ್ತಿಯುತ ಆಟ. ಪ್ರತಿ ದಿನವೂ ಕುಸ್ತಿ ಆಡುತ್ತಲೇ ಶಕ್ತಿ ಪ್ರದರ್ಶನ ಮಾಡಬೇಕು. ಅದಕ್ಕೆ ತಕ್ಕಂತೆ ಪೌಷ್ಟಿಕ ಆಹಾರದ ಅಗತ್ಯವಿದೆ. ಪೌಷ್ಟಿಕ ಆಹಾರದ ಕೊರತೆಯಿಂದ ಎಷ್ಟೋ ಆಟಗಾರರು ಕುಸ್ತಿ ಆಡುವುದನ್ನೇ ನಿಲ್ಲಿಸಿದ್ದಾರೆ. ಸರ್ಕಾರ ಕ್ರಿಕೆಟ್, ಫುಟ್‌ಬಾಲ್‌, ಹಾಕಿ ಕ್ರೀಡೆಗೆ ಮಾತ್ರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಕುಸ್ತಿಗೂ ಪ್ರಾಧಾನ್ಯ ನೀಡಿದರೆ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳು ಭಾರತದ ಬತ್ತಳಿಕೆ ಸೇರಲಿವೆ.

– ಬಾಲಕೃಷ್ಣ ಎಂ.ಆರ್., ಬೆಂಗಳೂರು 

ಸುಳ್ಳು ಸುದ್ದಿಗೆ ಶಿಕ್ಷೆ ಸ್ವಾಗತಾರ್ಹ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹಂಚಿಕೊಂಡಿದ್ದು ಸಾಬೀತಾದರೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ ₹10 ಲಕ್ಷ ದಂಡ ವಿಧಿಸಲು ಅವಕಾಶ ನೀಡುವ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜೂನ್‌ 21). ಸಾಮಾಜಿಕ ಜಾಲತಾಣದಂತೆಯೇ ರಾಜಕೀಯ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚುವವರಿಗೂ ಜೈಲು- ದಂಡ ವಿಧಿಸುವ ಕಾನೂನು ರೂಪಿತವಾಗಬೇಕಿದೆ.

– ಪಿ.ಜೆ. ರಾಘವೇಂದ್ರ, ಮೈಸೂರು

ಬೇಕು ಆರ್ಥಿಕ ಸಾಕ್ಷರತೆ

ರಾಜ್ಯ ಸರ್ಕಾರದ ನಿಗಮವೊಂದರ ಸಿಬ್ಬಂದಿಯು ಸಾಲ ಪಡೆದಿದ್ದ ಫಲಾನುಭವಿಯಿಂದ ಸಾಲ ವಸೂಲಾತಿಗಾಗಿ ಬಂದಿದ್ದರು. ‘ನಾನು ಹಣ ಕಟ್ಟುವುದಿಲ್ಲ. ಸಾಲ ಮನ್ನಾ ಆಗುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ’ ಎಂದು ಫಲಾನುಭವಿಯು ವಾದಿಸುತ್ತಿದ್ದರು.

‘ನೀವು ಕಾರ್ಯಕರ್ತರ ಮಾತು ಕೇಳಿಕೊಂಡು ಹಣ ಕಟ್ಟದಿದ್ದರೆ ಬಡ್ಡಿ ಮೊತ್ತ ಹೆಚ್ಚಾಗುವುದಿಲ್ಲವೆ? ನೀವು ಸಾಲ ಮರುಪಾವತಿ ಮಾಡುವುದರಿಂದ ನಿಮ್ಮಂತೆ ಅಗತ್ಯವಿರುವವರಿಗೆ ನಿಗಮದಿಂದ ಮತ್ತಷ್ಟು ನೆರವು ಸಿಗಲಿದೆ’ ಎಂದು ಫಲಾನುಭವಿಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ಸಾಲ ಮರುಪಾವತಿ ಮಾಡುವುದಾಗಿ ಒಪ್ಪಿಕೊಂಡರು. ನಿಗಮದಿಂದ ಸಾಲ ಪಡೆದು ಅನುಕೂಲ ಪಡೆದು ಆರ್ಥಿಕವಾಗಿ ಸಬಲರಾಗದಾಗಲೂ ಮರುಪಾವತಿ ಮಾಡದೆ ಸತಾಯಿಸುವುದನ್ನು ನೋಡಿದರೆ ಆರ್ಥಿಕ ಸಾಕ್ಷರತೆಯ ಅಗತ್ಯವಿದೆ ಎನಿಸುತ್ತದೆ.

– ಭೀಮಾನಂದ ಮೌರ್ಯ, ಮೈಸೂರು 

ಮತ್ತೆ ನೆನಪಾದ ಗಾಂಧಿ

ಜಗತ್ತಿನ ಎಲ್ಲಾ ಯುದ್ಧಗಳು ಶಾಂತಿ ಸ್ಥಾಪನೆಯ ನೆಪದಲ್ಲೇ ನಡೆದಿವೆ. ಎಲ್ಲಾ ಹಿಂಸೆಯೂ ಜನರ ಪಾಲಿಗೆ ನೆಮ್ಮದಿ ಸೃಜಿಸುವ ನೆಪದಲ್ಲೇ ಘಟಿಸಿವೆ. ಆಧುನಿಕ ನಾಗರಿಕತೆಯ ನೈತಿಕ ಸಮರ್ಥನೆ ನಿಂತಿರುವುದೇ ಹಿಂಸೆಯ ಮೇಲೆ ಎನ್ನುವುದು ಗಾಂಧೀಜಿಗೆ ಬಹಳ ಹಿಂದೆಯೇ ಅರ್ಥವಾಗಿತ್ತು. ಆ ಕಾರಣಕ್ಕೆ ಸುಸ್ಥಿರ ಬದುಕಿಗೆ ಅಗತ್ಯವೆಂದು ಅವರು ಪ್ರತಿಪಾದಿಸಿದ, ‘ಅಹಿಂಸೆ’ಯ ತತ್ವ ಉತ್ತಮ ಜಗತ್ತಿನ ಪಾಲಿಗೆ ಸಾಧನ ಮಾತ್ರವಲ್ಲ ದಾರಿಯೂ ಆಗಿತ್ತು.

ಪ್ರಸ್ತುತ ಜಗತ್ತು ಮೂರನೆಯ ಯುದ್ಧದ ಕಡೆಗೆ ಚಲಿಸುತ್ತಿದೆ ಅನ್ನುವ ಚರ್ಚೆಗಳು ನಡೆಯುತ್ತಿರುವ ಹೊತ್ತಿಗೆ ಗಾಂಧಿ ನೆನಪಾಗುತ್ತಿದ್ದಾರೆ. ಯುದ್ಧೋನ್ಮಾದ ಪ್ರದರ್ಶಿಸುತ್ತಿರುವ ಜಗತ್ತಿನ ನಾಯಕರ ಎದುರಿಗೆ ಭಾರತವು ಗಾಂಧಿಯನ್ನು; ಅವರ ಅಹಿಂಸಾ ತತ್ವವನ್ನು ಮಂಡಿಸಬಲ್ಲದೇ? ನಮ್ಮ ‘ರಾಜಕೀಯ ನಾಯಕತ್ವ’ವು ಗಾಂಧಿಯ ಅಲೋಚನೆಗಳನ್ನು ಆಧರಿಸಿ ಜಗತ್ತು ಎದುರಿಸುತ್ತಿರುವ ಸಂದಿಗ್ಧತೆಯಿಂದ ಪಾರಾಗುವ ಹಾದಿಯನ್ನು ಪ್ರತಿಪಾದಿಸಬೇಕಿದೆ.

– ಕಿರಣ್ ಎಂ. ಗಾಜನೂರು, ಕಲಬುರಗಿ   

ಸಚಿವರ ಕಾಲಿಗೆ ಎರಗುವುದು ಸರಿಯೇ?

ಹಾಸನದ ಜಿಲ್ಲಾಧಿಕಾರಿ ಲತಾಕುಮಾರಿ ಅವರು, ಸಾರ್ವಜನಿಕವಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಾಲಿಗೆ ನಮಸ್ಕರಿಸಿರುವುದು, ಸಚಿವರನ್ನು ಗುಣಗಾನ ಮಾಡಿರುವುದು ವರದಿಯಾಗಿದೆ. ಸರ್ಕಾರದ ಸೇವಾ ನಿಯಮಗಳಲ್ಲಿ ಈ ಕುರಿತು ಸ್ಪಷ್ಟತೆ ಇಲ್ಲ. ಆದರೆ, ಜಿಲ್ಲೆಯ ಕಾರ್ಯಾಂಗದ ಮುಖ್ಯಸ್ಥರಾದ ಅವರು, ಸಚಿವರ ಕಾಲಿಗೆ ನಮಸ್ಕರಿಸಿರುವುದು ಅವರ ಅಧೀನ ಅಧಿಕಾರಿಗಳ ಮೇಲೆ ಪರಿಣಾಮ ಬೀರಬಹುದಲ್ಲವೆ?

– ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.