ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಶಿಕ್ಷಕರು ಪರೀಕ್ಷಾ ಗೋಪ್ಯತೆ ಕಾಪಾಡಲಿ
ರಾಜ್ಯದ ಎಲ್ಲೆಡೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಈ ಬಾರಿಯ ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಉತ್ತರ ಪತ್ರಿಕೆಯೊಂದರಲ್ಲಿ ಒಬ್ಬ ವಿದ್ಯಾರ್ಥಿಯು ‘ಪಾಸ್ ಮಾಡಿ ಲವ್ ಉಳಿಸಿ’ ಎಂಬ ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾನಂತೆ. ಇನ್ನೊಬ್ಬ ವಿದ್ಯಾರ್ಥಿಯು 500 ರೂಪಾಯಿ ನೋಟನ್ನು ಉತ್ತರಪತ್ರಿಕೆಯಲ್ಲಿ ಇಟ್ಟು ‘ಸರ್ ದಯವಿಟ್ಟು ನನ್ನನ್ನು ಪಾಸ್ ಮಾಡಿ. ಇಲ್ಲದಿದ್ದರೆ ಮನೆಯಲ್ಲಿ ತಂದೆ– ತಾಯಿ ಬೈಯುತ್ತಾರೆ’ ಎಂದು ಬರೆದಿದ್ದಾನಂತೆ. ಈ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಮೌಲ್ಯಮಾಪಕರಾದವರು ಈ ವಿಷಯಗಳನ್ನು ಬಹಿರಂಗಪಡಿಸುವ ಅವಶ್ಯಕತೆ ಏನಿತ್ತು? ಈ ಮೂಲಕ ಪರೀಕ್ಷಾ ನಿಯಮಗಳನ್ನು ಅವರು ಗಾಳಿಗೆ ತೂರಿದಂತೆ ಆಗುವುದಿಲ್ಲವೇ? ಮೌಲ್ಯಮಾಪಕರು ಇಂತಹ ವಿಷಯಗಳನ್ನು ಬಹಿರಂಗಗೊಳಿಸಿರುವುದರಿಂದ ಹೀಗೆ ಬರೆದ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಬಹುದು. ಮೌಲ್ಯಮಾಪನ ಕರ್ತವ್ಯವನ್ನು ನಿರ್ವಹಿಸುವ ಶಿಕ್ಷಕರು ಇನ್ನಾದರೂ ಎಚ್ಚೆತ್ತುಕೊಂಡು ಪರೀಕ್ಷಾ ನಿಯಮಗಳಿಗೆ ಬದ್ಧರಾಗಿರಬೇಕು. ಗೋಪ್ಯತೆ ಕಾಯ್ದುಕೊಳ್ಳಬೇಕು.
–ಎ.ವೈ.ಸೋನ್ಯಾಗೋಳ, ಪಾಶ್ಚಾಪುರ
ಕಸಾಪ: ತಿದ್ದುಪಡಿಯಿಂದ ಸಾಧಿಸುವುದೇನು?
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಿಗೆ ಪರಮಾಧಿಕಾರ ನೀಡುವ, ಅಧ್ಯಕ್ಷರ ಕೈ ಬಲಪಡಿಸುವುದಕ್ಕೆ ಅನುವಾಗಿಸುವ ಉದ್ದೇಶದಿಂದ ಬೈಲಾಗೆ ತಿದ್ದುಪಡಿ ತರಲು ಮುಂದಾಗಿರುವುದಕ್ಕೆ ಸಂಬಂಧಿಸಿದ ವರದಿ ಓದಿ ಆಶ್ಚರ್ಯವಾಯಿತು. ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಕುರಿತು ಚಿಂತನೆಗಳು ಹಿಂದೆ ಸರಿದು ಅದೊಂದು ಅಧಿಕಾರ, ಅಂತಸ್ತು, ವೈಯಕ್ತಿಕ ಮೇಲಾಟದ ಕಣವಾಗಿ, ಅದಕ್ಕೆ ಪಕ್ಷ ರಾಜಕಾರಣದ ನಂಟೂ ಅಂಟಿದ ಮೇಲೆ ಇಂತಹ ಬೆಳವಣಿಗೆಗಳೆಲ್ಲ ನಿರೀಕ್ಷಿತವೆ. ಈಗ ಪ್ರಸ್ತಾಪಿಸಲಾಗುತ್ತಿರುವ ಬೈಲಾ ತಿದ್ದುಪಡಿಗಳು ಜಾರಿಯಾದರೆ ಕಸಾಪದ ಯಾವುದೇ ಸ್ಥಾನಕ್ಕೆ ಸ್ವಲ್ಪ ಸ್ವಾಭಿಮಾನ ಇರುವ ಯಾವುದೇ ವ್ಯಕ್ತಿ ಅಥವಾ ಸಾಹಿತಿ ಸದಸ್ಯನಾಗಲು ಅಥವಾ ನಾಮನಿರ್ದೇಶನಗೊಳ್ಳಲು ಅಪೇಕ್ಷಿಸಲಾರ. ಇನ್ನು ಜಿಲ್ಲಾಡಳಿತವನ್ನು ಉದ್ದೇಶಿಸಿ ಮಾಡಲಾಗುವ ತಿದ್ದುಪಡಿಗಳು ಜಿಲ್ಲಾಡಳಿತಕ್ಕೆ ಯಾವುದೇ ರೀತಿಯ ಬಂಧನಕಾರಿ ಆಗಲಾರವು.
ಸಾಹಿತ್ಯ ಪರಿಷತ್ತಿನ ಪೂರ್ವಸೂರಿಗಳು ಕನ್ನಡ ನಾಡು– ನುಡಿಗೆ ನಿಷ್ಕಾಮ ಸೇವೆ ಸಲ್ಲಿಸಿ ಯಾವುದೇ ಅಧಿಕಾರ, ಅಂತಸ್ತಿನ ಹಂಬಲ, ಬೆಂಬಲವಿಲ್ಲದೆ ಸರಿದುಹೋಗಿದ್ದಾರೆ. ಜಿಲ್ಲಾಡಳಿತ, ಜಿಲ್ಲೆಯ ಸಾಹಿತಿಗಳು, ರಾಜಕೀಯ ವ್ಯಕ್ತಿಗಳ ಸಹಯೋಗದೊಂದಿಗೆ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಬಿಟ್ಟರೆ ಕಸಾಪದಿಂದ ಯಾವುದೇ ಅರ್ಥವತ್ತಾದ ಕಾರ್ಯಕ್ರಮಗಳು ಈಗ ಜರುಗುತ್ತಿಲ್ಲ. ಸಭೆ, ಸಮ್ಮೇಳನಗಳಿಂದ ಕನ್ನಡ ನುಡಿಗೆ ಯಾವುದೇ ಪ್ರಯೋಜನವಾಗು ತ್ತಿಲ್ಲ. ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಕಲಿಕೆ ನೇಪಥ್ಯಕ್ಕೆ ಸರಿದು ಇಂಗ್ಲಿಷ್ ಮಾಧ್ಯಮ ಮುನ್ನೆಲೆಗೆ ಬರುತ್ತಿರುವಾಗ ಮತ್ತು ನಮ್ಮ ನುಡಿ ಆತಂಕದ ಪರಿಸ್ಥಿತಿ ಎದುರಿಸುತ್ತಿರುವಾಗ ಕಸಾಪದಂತಹ ಸಂಸ್ಥೆ ಆ ಕಡೆ ಗಮನ ನೀಡದೇ ಅಧಿಕಾರ ಕೇಂದ್ರೀಕರಣದತ್ತ ಗಮನಹರಿಸುತ್ತಿರುವುದು ನಾಡ– ನುಡಿಯ ಹಿತಸಾಧನೆಗಂತೂ ಅಲ್ಲ. ಕಸಾಪದಂತಹ ಸಂಸ್ಥೆಗಳೇ ಅಪ್ರಸ್ತುತವಾಗುವಂತಹ ಕಾಲಘಟ್ಟದಲ್ಲಿ ನಾವು ಈಗ ಇರುವಾಗ, ಬೈಲಾ ತಿದ್ದುಪಡಿಯಂತಹ ಕ್ರಮಗಳಿಂದ ಸಾಧಿಸುವುದಾದರೂ ಏನು?
–ವೆಂಕಟೇಶ ಮಾಚಕನೂರ, ಧಾರವಾಡ
ಸರ್ಕಾರದ ವಿಶ್ವಾಸಾರ್ಹತೆ ಒರೆಗಲ್ಲಿಗೆ
ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ (ಜಾತಿ ಜನಗಣತಿ) ಕುರಿತು ಯಾವುದೇ ನಿರ್ಣಯ ಕೈಗೊಳ್ಳದೇ ಸಮಾಪ್ತಿಗೊಂಡ ಸಚಿವ ಸಂಪುಟ ಸಭೆ, ಈ ವಿಷಯವನ್ನು ಮೇ 2ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಚರ್ಚೆಗೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಇದರಿಂದ ಅಲ್ಲಿಯವರೆಗೆ ಮಂತ್ರಿಮಂಡಲ ಬಚಾವ್ ಆದಂತಾಗಿದೆ. ಇಂಗ್ಲಿಷಿನ ‘ಬೈಟ್ ದ ಬುಲೆಟ್’ ಎಂಬ ಪ್ರಯೋಗ ಈಗಿನ ಪರಿಸ್ಥಿತಿಗೆ ಹೊಂದುತ್ತದೆ. ಕಷ್ಟದ ತೀರ್ಮಾನವೊಂದನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಹಿಂದೆಮುಂದೆ ನೋಡುವುದು, ಮುಂದೂಡುವುದು ಇನ್ನು ನಡೆಯದು. ಆ ನಿರ್ಧಾರದಿಂದ ಉದ್ಭವಿಸುವ ತೊಂದರೆಗಳಿಗೆ ಸಿದ್ಧವೂ ಆಗಿರಬೇಕಾಗುತ್ತದೆ. ‘ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ‘ಅಂದರಿಕೀ ಮಂಚಿವಾಡು ಅನಂತಯ್ಯ’ ಎಂಬ ನಾಣ್ಣುಡಿಯನ್ನು ನೆನಪಿಸುತ್ತದೆ. ಎಲ್ಲರನ್ನೂ ಮೆಚ್ಚಿಸಲು ಹೋಗಿ ಕೊನೆಗೆ ಯಾರೊಬ್ಬರಿಗೂ ಇಷ್ಟವಾಗದೇ ಹೋಗುವ ಸಾಧ್ಯತೆ ಇರುತ್ತದೆ.
‘ಜಾತಿ ದತ್ತಾಂಶಕ್ಕೆ ವಿರೋಧ ಏಕೆ?’ ಎಂದು ಒಂದು ಲೇಖನ (ಪ್ರ.ವಾ., ಏ. 17) ಪ್ರಶ್ನಿಸಿದರೆ, ಇನ್ನೊಂದು ಲೇಖನ, ‘ಏರಬೇಕಾಗಿದೆ ಮೀಸಲಾತಿ ಪ್ರಮಾಣ’ (ಪ್ರ.ವಾ., ಏ. 19) ಎಂದಿದೆ. ಎರಡು ಮೂಲಭೂತ ಅಂಶಗಳನ್ನು ಇಲ್ಲಿ ಪರಿಗಣಿಸಬೇಕಾಗಿದೆ. ಸಾಮಾಜಿಕ ನ್ಯಾಯ ಎಂದರೆ ಪ್ರಮಾಣವಾರು ಪ್ರಾತಿನಿಧ್ಯ (ಪ್ರೊಪೋಷನಲ್ ರೆಪ್ರೆಸೆಂಟೇಷನ್) ಎಂದು ಸಮೀಕರಿಸಬಹುದೇ? ಜನಸಂಖ್ಯೆಯು ಪ್ರತಿಕ್ಷಣ ಬೆಳೆಯುತ್ತಿರುವಾಗ, ಗಣತಿ ಹತ್ತು ವರ್ಷಗಳಿಗೊಮ್ಮೆ ನಡೆದು, ಆ ಸಂಖ್ಯೆ ಕೆಲ ಕಾಲದ ನಂತರ ತಿಳಿದುಬರುತ್ತದೆ (2021ರದು ಮುಂದೆಂದು ತಿಳಿಯುತ್ತದೋ ಗೊತ್ತಿಲ್ಲ). ಹೀಗಿರುವಾಗ ‘ನಮ್ಮ ಸಂಖ್ಯೆ ಎಷ್ಟೋ ಹೆಚ್ಚು ಇದೆ, ಲಕ್ಷಾಂತರ ಮಂದಿಯನ್ನು ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ’ ಎಂಬ ಮಾತು ಸರಿಯೇ? ಒಟ್ಟಿನಲ್ಲಿ, ರಾಜ್ಯ ಸರ್ಕಾರದ ವಿಶ್ವಾಸಾರ್ಹತೆಯ ಒರೆಗಲ್ಲಿನ ಸನ್ನಿವೇಶ ಇದು.
–ಎಚ್.ಎಸ್.ಮಂಜುನಾಥ, ಗೌರಿಬಿದನೂರು
‘ಪಾದ ಪರಿಶೀಲನೆ’ಯಿಂದ ತಿಳಿದದ್ದೆಂದರೆ...
ನಾಳೆಯ ಸದೃಢ ಸಮಾಜಕ್ಕೆ ಅವಶ್ಯವಿರುವ ವೈಜ್ಞಾನಿಕ ಮನೋಭಾವದ ಕುರಿತು ಮಲ್ಲಿಕಾರ್ಜುನ ಹೆಗ್ಗಳಗಿ ಚೆನ್ನಾಗಿ ವಿಶ್ಲೇಷಿಸಿದ್ದಾರೆ (ಸಂಗತ, ಏ. 18). ಪ್ರತಿದಿನವೂ ಕರಿದಾರ ಕಟ್ಟಿಕೊಂಡ ಲಲನೆಯರ ಪಾದ ನೋಡುವ ಹವ್ಯಾಸವನ್ನು 65ರ ವೃದ್ಧನಾದ ನಾನು ಬೆಳೆಸಿಕೊಂಡೆ. ಕೆಲವರು ನನ್ನ ಈ ವಿಚಿತ್ರ ‘ಪಾದ ಪರಿಶೀಲನೆ’ಯನ್ನು ಅಪಾರ್ಥ ಮಾಡಿಕೊಂಡು ಅಪಹಾಸ್ಯ ಕೂಡ ಮಾಡುತ್ತಿದ್ದರು. ಆದರೂ ಹಲವರನ್ನು ಕರಿದಾರ ಧರಿಸಿದ್ದಕ್ಕೆ ಕಾರಣ ಕೇಳುತ್ತಲೇ ಬಂದಾಗ ಸಿಕ್ಕ ಉತ್ತರ ‘ನಮ್ಮ ಹಿರಿಯರು ಹೇಳಿದರು, ಶುಭವಾಗುವುದಾದರೆ ಆಗಲಿ, ನಾವು ಕಳೆದುಕೊಳ್ಳುವುದೇನಿದೆ?’ ಒಟ್ಟಿನಲ್ಲಿ, ಈ ರೀತಿ ಅಪ್ಪ ಹಾಕಿದ ಆಲದ ಮರಕ್ಕೆ ನೇಣಿಗೆ ಶರಣು ಹೋಗುವ ಸಂಸ್ಕೃತಿ ಮುಂದುವರಿದರೆ ಆರೋಗ್ಯಪೂರ್ಣ ಸಮಾಜದ ನಿರ್ಮಿತಿ ಕನಸಾಗಿಯೇ ಉಳಿಯುವುದೇನೋ ಎಂಬ ಅನುಮಾನ ಮೂಡುತ್ತದೆ.
–ಅನಿಲಕುಮಾರ ಮುಗಳಿ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.