ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ

ವಾಚಕರ ವಾಣಿ
Published 20 ಆಗಸ್ಟ್ 2025, 19:01 IST
Last Updated 20 ಆಗಸ್ಟ್ 2025, 19:01 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಶಾಸಕರ ಭಕ್ತಿ ದಿಟವೋ ಸಟೆಯೋ...

ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಯುತ್ತಿದೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಪಕ್ಷಭೇದ ಮರೆತು ಶಾಸಕರು ಚರ್ಚಿಸಿದ್ದಾರೆ. ಮಂಜುನಾಥ ಸ್ವಾಮಿ ಬಗೆಗಿನ ತಮ್ಮ ಭಕ್ತಿ–ಭಾವ ಪ್ರದರ್ಶಿಸಿರುವ, ಧರ್ಮ ಹಾಗೂ ನೀತಿಯ ಬಗ್ಗೆ ಮಾತನಾಡುತ್ತಿರುವ ಈ ಶಾಸಕರಿಗೊಂದು ಪ್ರಶ್ನೆ: ಚುನಾವಣೆಯಲ್ಲಿ ಇವರು ಮತದಾರರಿಗೆ ಹಣ ಹಂಚದೆ ಗೆದ್ದಿರುವರೇ? ಇವರು ಧರ್ಮಸ್ಥಳಕ್ಕೆ ತೆರಳಿ ‘ನಾವು ಹಣ ಹಂಚದೆ ಚುನಾವಣೆ ಗೆದ್ದಿದ್ದೇವೆ’ ಎಂದು ಪ್ರಮಾಣ ಮಾಡಿ ಹೇಳಲಿ; ಇವರ ಭಕ್ತಿ ಸತ್ಯವೋ ಕಪಟವೋ ಎನ್ನುವುದು ರಾಜ್ಯಕ್ಕೆ ತಿಳಿಯಲಿ. 

ADVERTISEMENT

⇒ಸುಹಾಸ್ ದುಗ, ಮಂಡ್ಯ 

ಉಪರಾಷ್ಟ್ರಪತಿ ಅಭ್ಯರ್ಥಿ: ಚಾಣಾಕ್ಷ ನಡೆ

ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ, ತಮಿಳು ಮೂಲದ ಆರ್‌ಎಸ್‌ಎಸ್‌ ಕಾರ್ಯಕರ್ತ ಮತ್ತು ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದೆ. ‘ಇಂಡಿಯಾ’ ಬಣವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ತೆಲುಗು ಮೂಲದ ಸುದರ್ಶನ ರೆಡ್ಡಿ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಚಾಣಾಕ್ಷ ನಡೆ ಇಟ್ಟಿದೆ. 

ಎನ್‌ಡಿಎ ಕೂಟದ ಭಾಗವಾದ ತೆಲುಗು ದೇಶಂ ಪಕ್ಷದ ಜನಪ್ರತಿನಿಧಿಗಳು ಯಾರಿಗೆ ಮತ ಚಲಾಯಿಸಲಿದ್ದಾರೆ ಎಂಬುದು ಕೌತುಕದ ಸಂಗತಿ. ಒಂದೆಡೆ ತೆಲುಗು ಅಸ್ಮಿತೆಯ ಸೆಳೆತ ಇದ್ದರೆ, ಇನ್ನೊಂದೆಡೆ ರಾಜಕೀಯ ಒಗ್ಗಟ್ಟಿನ ಪ್ರಶ್ನೆಯೂ ಆ ಪಕ್ಷಕ್ಕೆ ಎದುರಾಗಿದೆ. 

ಪ್ರಕಾಶ ವಿ. ಹೆಬ್ಬಳ್ಳಿ, ಬೆಂಗಳೂರು

ಕೋಳಿಜಗಳಕ್ಕಿಂತ ‘ನಾಯಿಜಗಳ’ ದೊಡ್ಡದು

ಮನೆಯಂಗಳದಲ್ಲಿ ರಂಗೋಲಿ ಹಾಕುವ ಅನೇಕ ಮಹಿಳೆಯರಿಗೆ ಬೆಳಗ್ಗೆಯೇ ಕಂಡುಬರುವ ದೃಶ್ಯವೆಂದರೆ, ಮನೆಯ ಮುಂದೆ ಬಿದ್ದಿರುವ ನಾಯಿಗಳ ಮಲದ ತುಣುಕುಗಳು! ಜನದಟ್ಟಣೆ ಹೆಚ್ಚಿರುವ ಬಡಾವಣೆಗಳಲ್ಲಿ ನಾಯಿಗಳ ಜಗಳಕ್ಕಿಂತ ನಾಯಿಗಳಿಂದಾಗಿ ಶ್ವಾನ‌ಪ್ರಿಯರು ಹಾಗೂ ಸಂತ್ರಸ್ತರು ನಡೆಸುವ ಮಾರಾಮಾರಿ ದೊಡ್ಡದು. ನಸುಕಿನಲ್ಲಿ ವಾಕಿಂಗ್ ಹೆಸರಿನಲ್ಲಿ ನೆಚ್ಚಿನ ನಾಯಿಗಳನ್ನು ಕರೆದೊಯ್ಯುವುದು ಮತ್ತು ಮಲ ವಿಸರ್ಜನೆ ಬಳಿಕ ನಿವಾಸಿಗಳೊಂದಿಗೆ ಜಗಳ ಇಳಿಯುವುದು ಸರ್ವೇ ಸಾಮಾನ್ಯ. ಎಷ್ಟೋ ಬಾರಿ ಈ ನಾಯಿಜಗಳ ಠಾಣೆಯ ಮೆಟ್ಟಿಲೇರಿದ ನಿದರ್ಶನವಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಮತ್ತು ಜಗಳ ತಪ್ಪಿಸಲು ನಾಯಿ ಸಾಕುವವರು ನೋಂದಾಯಿಸಿಕೊಳ್ಳುವುದು ಮತ್ತು ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ತಮ್ಮ‌ ಮನೆಗಳಲ್ಲಿಯೇ ‘ನಾಯಿ ಶೌಚಾಲಯ’ ನಿರ್ಮಿಸುವುದನ್ನು ಪ್ರೋತ್ಸಾಹಿಸುವುದು ಸೇರಿದಂತೆ, ಸಾರ್ವಜನಿಕ ಸ್ಥಳಗಳಲ್ಲಿಯೂ ನಾಯಿಗಳಿಗಾಗಿ ಶೌಚಾಲಯ (ಶುಲ್ಕ ಸಹಿತ) ನಿರ್ಮಿಸುವ ಅಗತ್ಯವಿದೆ. ಈ ಸೌಲಭ್ಯ ಹೊಂದಿದ್ದರಷ್ಟೇ ನಾಯಿ ಸಾಕಲು ಅನುಮತಿ ನೀಡಬೇಕಿದೆ. 

ಟಿ. ನಾರಾಯಣ ಗೌಡ, ಬೆಂಗಳೂರು 

ಮನುಷ್ಯ ಮನುಷ್ಯನಾಗುವುದು ಯಾವಾಗ?

ಗಾಜಾ ಪಟ್ಟಿಯಲ್ಲಿ ಮಕ್ಕಳ ಹಸಿವಿನ ಆಕ್ರಂದನ (ಪ್ರ.ವಾ., ಆಗಸ್ಟ್‌ 20) ನೋಡಿದಾಗ ನಾವು ಮನುಷ್ಯ ಪ್ರಪಂಚದಲ್ಲಿ ಬದುಕುತ್ತಿದ್ದೇವೆಯೇ? ಎನ್ನುವ ಪ್ರಶ್ನೆ ಕಾಡುತ್ತದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಗ್ಧ ಮಕ್ಕಳ ಹಸಿವು, ತಂದೆ–ತಾಯಿ ಕಳೆದುಕೊಂಡವರ ಅನಾಥ ಸ್ಥಿತಿಯ ಆಕ್ರಂದನವನ್ನು ಗಮನಿಸಲಾರದಷ್ಟು ಸಂವೇದನಾಶೂನ್ಯರೇ? ಆತನ ಮೊಮ್ಮಕ್ಕಳೇ ಈ ಸ್ಥಿತಿಗೆ ತಲುಪಿದ್ದರೆ ಕರುಳು ಚುರ್ ಎನ್ನದೆ ಇರುತ್ತಿತ್ತೆ? ಮಕ್ಕಳ ಕಂಗಾಲಾದ ಮುಖ ಕಂಡು ನಮ್ಮಲ್ಲಿ ಮನುಷ್ಯತ್ವ ಮಿಡಿಯದಿದ್ದರೆ ನಾವು ಮನುಷ್ಯರಾಗಿ ಹುಟ್ಟಿ ಮನುಷ್ಯರಾಗಿ ಬಾಳುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡದಿರದು. ಇದು ಆಳುವ ವರ್ಗಕ್ಕೆ ಅರ್ಥವಾಗುತ್ತಿಲ್ಲ ಏಕೆ?  

ಚಂದ್ರಶೇಖರ್ ಎನ್., ಸಿರಿವಂತೆ

ಬಫರ್ ವಲಯ ಕಡಿತ ಸರಿಯಲ್ಲ

ಕೆರೆಗಳ ಬಫರ್ ವಲಯ ಕಡಿತಗೊಳಿಸುವ ಉದ್ದೇಶದ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ– 2025’ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವುದು ಖೇದಕರ. ಬಫರ್ ವಲಯವೆಂದರೆ ಮಳೆಗಾಲದ ನೆರೆ ನಿಯಂತ್ರಿಸಿ, ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸುವ ಸಮೃದ್ಧ ಕೆರೆಯಂಚು. ಪಶು, ಪಕ್ಷಿಗಳಿಗೆ ಆಹಾರ ಒದಗಿಸುವುದು, ಜಲಚರಗಳ ವಂಶಾಭಿವೃದ್ಧಿಗೆ ಆಶ್ರಯ ನೀಡುವುದು ಇತ್ಯಾದಿ ಹಲವು ಪರಿಸರ ಸಂಬಂಧಿ ಸೇವೆಗಳನ್ನು ನಿರ್ವಹಿಸುವ ಜೀವವೈವಿಧ್ಯದ ತಾಣ! ಕಾನೂನು ತಿದ್ದುಪಡಿಯು ಭವಿಷ್ಯದಲ್ಲಿ ಕುಡಿಯುವ ಹಾಗೂ ಕೃಷಿ ನೀರಿನ ಸುರಕ್ಷತೆಗೆ ಇನ್ನಷ್ಟು ಭಂಗ ತರಲಿದೆ. ಭೂಒತ್ತುವರಿ, ಕೈಗಾರಿಕೀಕರಣ, ನಗರೀಕರಣದಿಂದ ನಾಡಿನ ಜೌಗು ಪ್ರದೇಶಗಳೆಲ್ಲ ಈಗಾಗಲೇ ವೇಗವಾಗಿ ಕರಗುತ್ತಿರುವಾಗ, ಇದು ಖಂಡಿತ ವಿವೇಕಯುತ ನಡೆಯಲ್ಲ.

ಕೇಶವ ಎಚ್. ಕೊರ್ಸೆ, ಶಿರಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.