ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಬಡ್ಡಿ ಮನ್ನಾ: ತಪ್ಪು ಸಂದೇಶ ರವಾನೆ
ಬೆಂಗಳೂರಿನಲ್ಲಿ ಸಾರಿಗೆ ನಿಯಮ ಉಲ್ಲಂಘಿಸಿ ದಂಡ ಪಾವತಿಸದವರಿಗೆ
ಶೇ 50ರಷ್ಟು ವಿನಾಯಿತಿ ನೀಡಲಾಗಿತ್ತು. ಈಗ ನೀರಿನ ತೆರಿಗೆ ಬಾಕಿದಾರರು ಮೂರು ತಿಂಗಳೊಳಗೆ ಅಸಲು ಮೊತ್ತ ಪಾವತಿಸಿದರೆ ದಂಡ ಮತ್ತು ಬಡ್ಡಿ ಮನ್ನಾದ ನಿರ್ಧಾರ ಪ್ರಕಟವಾಗಿದೆ. ಈ ನಿರ್ಧಾರ ಕೆಲವರ ತಾತ್ಕಾಲಿಕ ಬಾಧೆಯನ್ನು ನಿವಾರಿಸಬಹುದು. ಸಾರ್ವಜನಿಕ ಹಣದ ಶಿಸ್ತಿನ ಬಳಕೆಗೆ ನಾಗರಿಕರನ್ನು ಪ್ರೋತ್ಸಾಹಿಸಬೇಕಾದ ಸಂದರ್ಭದಲ್ಲಿ ಇಂತಹ ಮನ್ನಾಗಳು ತಪ್ಪು ಸಂದೇಶ ನೀಡುತ್ತವೆ. ಸಮಯಕ್ಕೆ ಸರಿಯಾಗಿ ಪಾವತಿಸುವ ಪ್ರಾಮಾಣಿಕ ನಾಗರಿಕರ ನ್ಯಾಯಬದ್ಧತೆ ಮಸುಕಾಗುತ್ತದೆ. ನಿಯಮ ಪಾಲಕರಿಗೆ ಉತ್ತೇಜನ, ಉಲ್ಲಂಘನೆ ಮಾಡುವವರಿಗೆ ಕಟ್ಟುನಿಟ್ಟಿನ ಕ್ರಮದ ಮೂಲಕವೇ ಉತ್ತಮ ಆಡಳಿತ ಸಾಧ್ಯ. ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ.
⇒ಜಿ. ನಾಗೇಂದ್ರ ಕಾವೂರು, ಸಂಡೂರು
ಖಾದಿ ಮೇಲೆ ಕಾವಿ ಸವಾರಿ ಏಕೆ?
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ನಡೆಯುತ್ತಿರುವ ಗುದ್ದಾಟದಲ್ಲಿ ಮಠಾಧೀಶರ ಪ್ರವೇಶ ಸರಿ ಎನಿಸದು. ಈಗಾಗಲೇ, ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರಕ್ಕೆ ಮಠಗಳು ಪ್ರವೇಶಿಸಿದರೆ ಅವು ಕೂಡ ಕಲುಷಿತಗೊಳ್ಳುತ್ತವೆ. ಅವುಗಳ ಮೇಲೆ ಜನರ ನಂಬಿಕೆಯೂ ಕ್ಷೀಣಿಸಿ ಸ್ವಾಮೀಜಿಗಳು ಗೌರವ ಕಳೆದುಕೊಳ್ಳಬೇಕಾಗುತ್ತದೆ. ಮಠಗಳು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೆ ಹೊರತು ಬೇರ್ಪಡಿಸುವ ಸಾಹಸಕ್ಕೆ ಕೈಹಾಕುವುದು ಸರ್ವತಾ ನ್ಯಾಯವಲ್ಲ. ರಾಜಕಾರಣದಲ್ಲಿ ಮಾತಿಗೆ ಬದ್ಧತೆ ಇರುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಮೋಸ, ವಂಚನೆ ಸ್ವಾಭಾವಿಕ. ಅದು ರಾಜಕೀಯ ನಾಯಕರ ಸ್ವಭಾವವೂ ಹೌದು. ಮಠಾಧೀಶರಿಗೆ ಈ ಸತ್ಯ ಅರಿವಾಗದಿರುವುದು ಸೋಜಿಗ.
⇒ವಿ.ಜಿ. ಇನಾಮದಾರ, ಸಾರವಾಡ
ರಾಜ್ಯದ ರಾಜಕೀಯ ಪರಿಸ್ಥಿತಿ ಹಾಸ್ಯಾಸ್ಪದ
ಈಗಲೂ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ನಂತರ ಮಕ್ಕಳಿಂದ ದಿನಪತ್ರಿಕೆಗಳಲ್ಲಿನ ಮುಖ್ಯ ಸುದ್ದಿ ಓದಿಸುವ ಸಂಪ್ರದಾಯವಿದೆ. ಆದರೆ, ಇಂದು ಆ ಮಕ್ಕಳು ಓದುವ ಸುದ್ದಿಯಾದರೂ ಏನು? ‘ಬೀದಿಗೆ ಬಂದ ಕುರ್ಚಿ ಕುಸ್ತಿ’. ಇದು ಇಂದಿನ ರಾಜಕೀಯ ಪರಿಸ್ಥಿತಿ; ಹಾಸ್ಯಾಸ್ಪದವಲ್ಲದೆ ಮತ್ತೇನು? ಸಮಾಜದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳಿಲ್ಲ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಕುರಿತಂತಾಗಲೀ, ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯಾಗಲೀ ಚರ್ಚೆಗಳಿಲ್ಲ. ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ಹಣದ ಸೋರಿಕೆ ತಡೆಯಲಾಗುತ್ತಿಲ್ಲ. ರಾಜಕೀಯ ಮುಖಂಡರು ಜನರಿಗೆ ಮಾರ್ಗದರ್ಶಕರಾಗುವ ಬದಲು ಅವರ ದಾರಿ ತಪ್ಪಿಸುತ್ತಿದ್ದಾರೆ. ಮಠಾಧೀಶರು ಧಾರ್ಮಿಕ ಚೌಕಟ್ಟಿನಲ್ಲಿ ಸಮಾಜ ಸುಧಾರಣೆಗೆ ಶ್ರಮಿಸುವುದನ್ನು ಬಿಟ್ಟು ತಮ್ಮ ಜಾತಿಯವರಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಎಂದಿನ ಸದಾಚಾರದ ನಡವಳಿಕೆಯ ಕಾರಣದಿಂದ ಜನರ ಅಭಿಮಾನ ಉಳಿಸಿಕೊಂಡಿದ್ದಾರೆ. ಚುನಾವಣೆಯಾಗಿ ಎರಡೂವರೆ ವರ್ಷಗಳ ಮೇಲಾದರೂ ಈ ಕುರ್ಚಿಯ ಕಿತ್ತಾಟದಿಂದಾಗಿ ಎಲ್ಲ ಗ್ಯಾರಂಟಿಗಳ ನಡುವೆಯೂ ಜನರ ಜೀವನದಲ್ಲಿ ನಿರೀಕ್ಷಿತ ಬದಲಾವಣೆಯೇನೂ ಆಗಿಲ್ಲ.
⇒ಲಕ್ಷ್ಮಿ ಚಂದ್ರಶೇಖರ್, ಪ್ರೊ. ಬಿ.ಕೆ. ಚಂದ್ರಶೇಖರ್, ಬೆಂಗಳೂರು
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ
ಇತ್ತೀಚೆಗೆ ಕುಟುಂಬ ಸಮೇತ ಅಸ್ಸಾಂನಿಂದ ಭುವನೇಶ್ವರಕ್ಕೆ ರೈಲಿನಲ್ಲಿ ಒಂದು ದಿನದ ಪ್ರವಾಸ ಮಾಡಿದೆ. ಈ ವೇಳೆ ನಾವೆಲ್ಲ ಕನ್ನಡದ ಹಾಡುಗಳ ಅಂತ್ಯಾಕ್ಷರಿ ಹಾಡುತ್ತಿದ್ದೆವು. ಇದನ್ನು ಪಕ್ಕದ ಬೋಗಿಯಲ್ಲಿದ್ದ ಕೋಲ್ಕತ್ತದ 11 ವರ್ಷದ ಬಾಲಕಿ ಕುತೂಹಲದಿಂದ ಬಂದು ನೋಡುತ್ತಿದ್ದಳು. ನೀನು ಯಾವುದಾದರೂ ಬೆಂಗಾಳಿ ಭಾಷೆಯ ಹಾಡು ಹೇಳು ಎಂದು ಕೇಳಿಕೊಂಡೆ. ಮಧುರವಾಗಿ ಹಾಡೊಂದನ್ನು ಹೇಳಿದಳು. ಮತ್ತೊಂದು ಹಾಡು ಹೇಳಲು ಕೇಳಿಕೊಂಡಾಗ ಎದ್ದು ನಿಂತು, ‘ವಂದೇ ಮಾತರಂ’ ಗೀತೆ ಹಾಡಿದಳು. ಆ ಬಾಲಕಿಗೆ ಪೋಷಕರು ಕಲಿಸಿರುವ ಸಂಸ್ಕಾರವು ನೆನಪಲ್ಲಿ ಉಳಿಯಿತು. ಇತ್ತೀಚೆಗೆ ಪೋಷಕರು ಮಕ್ಕಳಿಗೆ ಬರೀ ಅಂಕ ಗಳಿಕೆಯ ಬಗೆಗೆ ತಲೆಗೆ ತುಂಬುತ್ತಾರೆ. ಸಂಸ್ಕಾರಯುತ ನಡವಳಿಕೆ ಬಗ್ಗೆಯೂ ತಿಳಿಹೇಳಬೇಕಿದೆ.
⇒ಟಿ.ಎಸ್. ಪ್ರತಿಭಾ, ಚಿತ್ರದುರ್ಗ
ಶಾಲಾ ಮಕ್ಕಳ ಕೈಗೆ ಲೇಖನಿ ಕೊಡಿ...
ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಮೊದಲು ಮಕ್ಕಳಿಗೆ ಕನ್ನಡ ಅಕ್ಷರ ಕಲಿಸಿ, ಭಾಷೆ ಕಲಿಸಿ, ಮಾತು ಕಲಿಸಬೇಕು. ಇದ್ಯಾವುದನ್ನೂ ಕಲಿಸದೆ ಒಮ್ಮೆಲೇ ಕಂಪ್ಯೂಟರ್ ಶಿಕ್ಷಣ ನೀಡುತ್ತೇವೆಂದರೆ ಅದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗುತ್ತದೆ. ಆಗ ಉಸಿರು ಕಟ್ಟುವುದು ಖಚಿತ. ಮಕ್ಕಳ ಕೈಗೆ ಮೊದಲು ಲೇಖನಿ ಕೊಡಿ; ಯಂತ್ರಗಳನ್ನಲ್ಲ.
⇒ಅ.ನಾ. ರಾವ್ ಜಾದವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.