ಮೂಕಪ್ರಾಣಿಗಳನ್ನು ದೂರುವುದರಲ್ಲಿ ಅರ್ಥವಿದೆಯೇ?
ಮನೆಯಲ್ಲಿ ಮೂತ್ರ ವಿಸರ್ಜಿಸಿದ ಕಾರಣಕ್ಕೆ ಬೆಕ್ಕಿನ ಮರಿಗೆ ಬೆಂಗಳೂರಿನಲ್ಲಿ ಯುವಕನೊಬ್ಬ ಕಾಲಿನಿಂದ ಒದ್ದು ಗಾಯ ಮಾಡಿರುವ ಸಂಬಂಧ, ಆತನ ಜೊತೆಯಲ್ಲಿ ವಾಸವಿರುವ ಮತ್ತೊಬ್ಬ ಯುವಕ ದೂರು ನೀಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಡಿ. 2). ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದು ಆಶ್ಚರ್ಯಕರ ಸಂಗತಿ. ಪ್ರಾಣಿ–ಪಕ್ಷಿಗಳೋ ಜಾಗ ಯಾವುದೇ ಇರಲಿ ತಮಗರಿವಿಲ್ಲದಂತೆ ಮಲ–ಮೂತ್ರ ವಿಸರ್ಜನೆ ಮಾಡುವುದು ಸಹಜ. ಪ್ರಜ್ಞಾವಂತ ಮನುಷ್ಯರೇ ಸದಾ ಜನ ಓಡಾಡುವ ರಸ್ತೆಬದಿಯಲ್ಲೇ ಮೂತ್ರ ವಿಸರ್ಜಿಸುವ ಬಗ್ಗೆ ದೂರುಗಳು ಕೇಳಿ ಬರುತ್ತಿರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಉಳವಿಗೆ ಇತ್ತೀಚೆಗೆ ಹೋಗಿದ್ದಾಗ, ದರ್ಶನ ಮುಗಿಸಿ ನಾವಿದ್ದ ಕೊಠಡಿಗೆ ತೆರಳುತ್ತಿದ್ದೆವು. ಆಗ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಟಿ.ಟಿ. ವಾಹನದಲ್ಲಿದ್ದವರು ಮೂಗು, ಬಾಯಿ ಮುಚ್ಚಿಕೊಂಡು, ಕೆಲವರು ಕೆಮ್ಮುತ್ತಾ ಇಳಿಯುತ್ತಿದ್ದರು. ಕಾರಣ ಕೇಳಿದಾಗ, ‘ಅಂಥದ್ದೇನಿಲ್ಲ, ನಮ್ಮಲ್ಲಿದ್ದ ಒಬ್ಬರು ಹೊಲಸು ತುಳಿದುಬಂದಿದ್ದರಿಂದ ವಾಹನದಲ್ಲಿ ತುಂಬಾ ವಾಸನೆ ಆವರಿಸಿತ್ತು, ಸ್ವಚ್ಛ ಮಾಡಲು ಇಳಿಯಬೇಕಾಯಿತು’ ಎಂದರು. ರಸ್ತೆ ಪಕ್ಕದಲ್ಲಿಯೇ ಬಯಲು ಬಹಿರ್ದೆಸೆ ಮಾಡಿದ್ದುದು ಕಂಡುಬಂತು. ಅದೂ ದೇವಾಲಯದ ಸನಿಹದಲ್ಲೇ!
ಕೆಲವರು ಮಾಡುವ ಇಂತಹ ಅಸಹ್ಯಕರ ಕೃತ್ಯಗಳಿಗೆ ಹೊಣೆ ಯಾರು? ಬಯಲು ಬಹಿರ್ದೆಸೆಯು ರೋಗ
ರುಜಿನಗಳಿಗೆ ಕಾರಣವಾಗುತ್ತದಾದ್ದರಿಂದ, ಈ ಬಗೆಗಿನ ದುಷ್ಪರಿಣಾಮದ ಬಗ್ಗೆ ಹಲವು ರೀತಿಯಲ್ಲಿ ಜನರ ಗಮನ ಸೆಳೆಯಲಾಗುತ್ತದೆ. ಆದರೂ ಅರಿವುಳ್ಳವರೇ ಹೀಗೆ ಅಜ್ಞಾನ ಪ್ರದರ್ಶಿಸುತ್ತಾರೆ. ಇನ್ನು ಪ್ರಾಣಿ–ಪಕ್ಷಿಗಳನ್ನು ಇದಕ್ಕಾಗಿ ದೂರುವುದರಲ್ಲಿ ಅರ್ಥವಿದೆಯೇ?
-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ
ಅಭಿವೃದ್ಧಿಗೆ ಮಾರಕವಾದ ಹೇಳಿಕೆ
‘ಭಾರತೀಯ ಸಮಾಜ ಉಳಿಯಬೇಕಾದರೆ ಪ್ರತಿ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕರೆ ನೀಡಿರುವುದು (ಪ್ರ.ವಾ., ಡಿ. 2) ಅವೈಜ್ಞಾನಿಕ ಹಾಗೂ ಒಂದು ದೇಶದ ಅಭಿವೃದ್ಧಿಗೆ ಮಾರಕವಾಗುವಂಥದ್ದು. ನಾಗಾಲೋಟದಿಂದ ಓಡುತ್ತಿರುವ ಈ ನಾಗರಿಕ ಸಮಾಜದಲ್ಲಿ ಒಂದು ಮಗುವಿಗೇ ಗುಣಮಟ್ಟದ ಶಿಕ್ಷಣ, ಆರೋಗ್ಯದಂತಹ ಮೂಲ ಸೌಕರ್ಯಗಳನ್ನು ಒದಗಿಸಿ ಸದೃಢವಾಗಿ ಬೆಳೆಸಲು ಪೋಷಕರು ಹೆಣಗಾಡುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗಿರುವಾಗ, ಭಾಗವತ್ ಅವರ ಈ ಹೇಳಿಕೆ ತುಂಬಾ ಅಪಾಯಕಾರಿಯಾದದ್ದು ಎನಿಸುತ್ತದೆ. ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯ
ಪ್ರಮಾಣದಲ್ಲಿರುವುದನ್ನು ಹಲವಾರು ಸಮೀಕ್ಷಾ ವರದಿಗಳು ತಿಳಿಸಿವೆ. ಈಗ ಇರುವ ಮಕ್ಕಳಿಗೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೇ ಇರುವಾಗ ಭಾಗವತ್ ಅವರ ಹೇಳಿಕೆ ಜಾರಿಗೆ ಬಂದರೆ ಎಂತಹ ದುಃಸ್ಥಿತಿ ಎದುರಾಗಬಹುದು? ಇದೆಲ್ಲವನ್ನೂ ಗಮನಿಸಿಯೇ ಸರ್ಕಾರ ಕುಟುಂಬ ಯೋಜನೆ ಜಾರಿಗೆ ತಂದು ಹಲವಾರು ವರ್ಷಗಳೇ ಸಂದುಹೋಗಿವೆ.
ಇನ್ನು ‘ಭಾರತೀಯ ಸಮಾಜ’ ಎಂದರೆ ಭಾಗವತ್ ಅವರ ದೃಷ್ಟಿಯಲ್ಲಿ ಯಾವುದು ಎನ್ನುವ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಅವರ ‘ಭಾರತೀಯ ಸಮಾಜ’ದ ಕಲ್ಪನೆ ಜಾತ್ಯತೀತವಾದದ್ದೇ ಅಥವಾ ಅವರು ಪ್ರತಿನಿಧಿಸುವ ಹಿಂದೂ ಸಮಾಜಕ್ಕೆ ಮಾತ್ರ ಸೀಮಿತವಾದದ್ದೇ ಎಂಬ ಅಂಶ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿಲ್ಲ. ಅದು ಹಿಂದೂ ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದೇ ಆದರೆ ಹಿಂದೂ ತುಷ್ಟೀಕರಣದ ಒಂದು ಭಾಗವಾಗಿ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಒಂದು ಹೇಳಿಕೆಯಾಗಿ ಇದನ್ನು ಪರಿಗಣಿಸಬೇಕಾಗುತ್ತದೆ.
-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ
ಚೇತೋಹಾರಿ ಉಪದೇಶಾಮೃತ ಹರಿದುಬರಲಿ
ಅಭಿನವ ಗವಿಸಿದ್ಧೇಶ್ವರ ಸ್ವಾಮಿಯವರ ‘ನುಡಿಬೆಳಗು’ ಅಂಕಣ ಬರಹಗಳನ್ನು ಓದಿದಾಗ, ಬಹುತೇಕ ಬಾರಿ ನಮ್ಮ ಮನಸ್ಸು ಬೆಳಗುವುದರ ಬದಲು ಅತ್ಯಂತ ನೋವಿನಲ್ಲಿ ಮುದುಡುತ್ತದೆ. ಕಾರಣ, ಸಾವನ್ನು ಕುರಿತ ಬರಹಗಳೇ ಹೆಚ್ಚಾಗಿರುತ್ತವೆ. ನಿತ್ಯ ಜೀವನದ ಆಗುಹೋಗುಗಳನ್ನು ಸಾವಿನೊಂದಿಗೆ ಸಮೀಕರಿಸಿ ಹೇಳುವ ಪರಿ ಅತ್ಯಂತ ವೇದನೆ ತರಿಸುತ್ತದೆ. ಸಾವು ನೈಸರ್ಗಿಕ ವಿದ್ಯಮಾನ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಎಂದೋ ಒಂದು ದಿನ ಸಾಯುತ್ತೇವೆ ಎಂದು, ಅಂಗೈಯಲ್ಲಿರುವ ನಮ್ಮ ಸುಂದರ ಬದುಕನ್ನು ಈಗಿನಿಂದಲೇ ಸಜ್ಜುಗೊಳಿಸಬೇಕೇಕೆ?
ಎಲ್ಲರೊಂದಿಗೆ ಪ್ರೀತಿಯಿಂದ, ಸಾಮರಸ್ಯದಿಂದ ಬೆರೆತು ಬಾಳುವುದೇ ಜೀವನ. ಹೀಗಿರುವಾಗ, ಜೀವನವನ್ನು ಸಾವಿನೊಂದಿಗೆ ಸಮೀಕರಿಸಿ ಹೇಳುವುದು ಬೇಡ. ಇಂತಹ ಬರಹಗಳನ್ನು ಓದಿದಾಗ, ನಮ್ಮ ಕುಟುಂಬದಲ್ಲಿ ಕಳೆದು ಕೊಂಡಿರುವವರ ನೆನಪು ಮರುಕಳಿಸಿ, ಇಡೀ ದಿನ ದುಃಖಪಡುವಂತೆ ಆಗುತ್ತದೆ. ಇದು ನನ್ನ ಸ್ವ ಅನುಭವ. ಗುರುಗಳೇ, ಸಾವು ಎಂಬ ಪದವನ್ನು ಪ್ರಸ್ತಾಪಿಸದೆ, ಆಶಾದಾಯಕವಾದ, ಭರವಸೆಯುಕ್ತ, ಚೇತೋಹಾರಿ ಉಪದೇಶಾಮೃತ ತಮ್ಮಿಂದ ಹರಿದುಬರಲಿ. ಜೀವನದ ಜಂಜಾಟಗಳಿಗೆ ಹೊಂಬೆಳಕಿನ ದಾರಿ ತೋರಿಸುವಂತಾಗಲಿ.
-ಕೆ.ಎಂ.ರುಕ್ಮಿಣಿ ವೆಂಕುಮಾರ್, ಬೆಂಗಳೂರು
ಜಾತಿ, ಧರ್ಮದ ಆಧಾರದಲ್ಲಿ ಜಯಂತಿ ತರವೇ?
ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತಿಯನ್ನು ಆಚರಿಸಲು ಅಧಿಕಾರಿಗಳು ಅನುಮತಿ ನೀಡದಿರುವುದು ಮತ್ತು ಅದನ್ನು ಪುರಸಭೆಯ ಮುಸ್ಲಿಂ ಸದಸ್ಯರು ಪ್ರತಿಭಟಿಸಿರುವುದು ತೇರದಾಳದಿಂದ ವರದಿಯಾಗಿದೆ. ನಾವು ಶಾಲೆ– ಕಾಲೇಜು ಓದುವಾಗ ರಾಷ್ಟ್ರೀಯ ನಾಯಕರ ಜಾತಿ, ಧರ್ಮದ ವಿಚಾರವೇ ಬರುತ್ತಿರಲಿಲ್ಲ. ನಾನು ಓದಿದ್ದು ಲಿಂಗಾಯತರ ಸಂಸ್ಥೆಯಾದ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನಲ್ಲಿ. ವಾಸವಿದ್ದದ್ದು ಕಾಲೇಜಿನ ಎಂ.ಎ.ಎಂ. ಅಂದರೆ ಮೌಲಾನಾ ಆಜಾದ್ ಮೆಮೋರಿಯಲ್ ಹಾಸ್ಟೆಲ್‌ನಲ್ಲಿ. ಮೌಲಾನಾ ಅವರು ಮೂಲತಃ ಮೆಕ್ಕಾದವರು. ವಿದ್ವಾಂಸರಾಗಿದ್ದ ಅವರಿಗೆ ಪಾಕಿಸ್ತಾನಕ್ಕೆ ಬರಲು ಜಿನ್ನಾ ಬಹಳ ಒತ್ತಡ ಹಾಕಿದ್ದರು. ಪಾಕಿಸ್ತಾನ ಸೇರಿದರೆ ಅವರನ್ನೇ ಪ್ರಧಾನಿ ಮಾಡುವುದಾಗಿ ಸಹ ಹೇಳಿದ್ದರು. ಆದರೂ ಅವರು ಭಾರತ ಬಿಟ್ಟು ಹೋಗಲು ಒಪ್ಪಲಿಲ್ಲ. ಮುಸ್ಲಿಂ ಅನ್ನುವ ಕಾರಣಕ್ಕೆ ಇವರ ಜಯಂತಿಯನ್ನು ವಿರೋಧಿಸುವುದು ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ಈಗ ಕಿತ್ತೂರು ಚೆನ್ನಮ್ಮ, ಕಾಳಿದಾಸ, ವಾಲ್ಮೀಕಿ, ಟಿಪ್ಪು, ಶಿವಾಜಿ, ವಿವೇಕಾನಂದ ಎಲ್ಲರನ್ನೂ ಒಂದೊಂದು ಜಾತಿ, ಪಕ್ಷದವರು ಗುತ್ತಿಗೆ ಹಿಡಿದಿದ್ದಾರೆ. ವೀರ ವನಿತೆ ಒನಕೆ ಓಬವ್ವನ ಜಾತಿಯನ್ನು ಸಹ ಪತ್ತೆ ಹಚ್ಚಿದ್ದಾರೆ. ಇದೆಲ್ಲ ಸಮಾಜ ಅವನತಿಯ ಹಾದಿ ಹಿಡಿದಿರುವುದರ ಲಕ್ಷಣ.
-ಶಶಿಧರ ಪಾಟೀಲ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.